ಹೆಸ್ಕಾಂನಿಂದ ಉಚಿತ ವಿದ್ಯುತ್ ಯೋಜನೆ ಕುರಿತು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಗಳ ವಿವರ.

June 9, 2023 | Siddesh

ರಾಜ್ಯದಲ್ಲಿ ನೂತನ ಸರಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದಿರುವ ಗೃಹ ಜ್ಯೋತಿ ಯೋಜನೆಯ ಕುರಿತು ಗ್ರಾಹಕರಲ್ಲಿರುವ ಗೊಂದಲಗಳಿಗೆ ಉತ್ತರ ನೀಡುವ ದೇಸೆಯಲ್ಲಿ ಹೆಸ್ಕಾಂ ಕಚೇರಿಯಿದ ಈ ಯೋಜನೆಯ ಕುರಿತು ಗ್ರಾಹಕರು ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳನ್ನು ಪ್ರಕಟಿಸಲಾಗಿದೆ.

ಗೃಹ ಜ್ಯೋತಿ ಯೋಜನೆ ಕುರಿತು ಗ್ರಾಹಕರು ಪದೇ ಪದೇ ಕೇಳಲಾಗುವ ಪ್ರಶ್ನೆಗಳು: 

ಗೃಹ ಜ್ಯೋತಿ - ಪದೇ ಪದೇ ಕೇಳಲಾಗುವ ಪ್ರಶ್ನೆಗಳು
1. ನಾನು ಈ ಯೋಜನೆಗೆ ಅರ್ಹನೇ?
ಕರ್ನಾಟಕ ರಾಜ್ಯದ ಎಲ್ಲಾ ಗೃಹ ಬಳಕೆ ಗ್ರಾಹಕರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

2. ಗೃಹ ಜ್ಯೋತಿ ಯೋಜನೆ ಎಂದರೇನು?
ಗೃಹ ಜ್ಯೋತಿ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ಕರ್ನಾಟಕದ ಪ್ರತಿ ಗೃಹ ಬಳಕೆದಾರರಿಗೆ 200 ಯೂನಿಟ್‌ಗಳನ್ನು ಒಳಗೊಂಡಂತ ಉಚಿತ ವಿದ್ಯುತ್ ಅನ್ನು ಒದಗಿಸುತ್ತದೆ.

3. ಈ ಯೋಜನೆಯನ್ನು ಪಡೆಯಲು ನಾನು ಏನು ಮಾಡಬೇಕು?
ಈ ಯೋಜನೆಯನ್ನು ಪಡೆಯಲು ಪ್ರತಿ ಗೃಹ ಬಳಕೆ ಗ್ರಾಹಕರು ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಇದರ ಲಿಂಕ್ ಅನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು. ನೋಂದಣಿ ಜೂನ್-15 ರಿಂದ ಪ್ರಾರಂಭವಾಗುತ್ತದೆ.

4. ಈ ಯೋಜನೆಯನ್ನು ಯಾವಾಗಿನಿಂದ ಜಾರಿಗೆ ತರಲಾಗುತ್ತದೆ?
ಜುಲೈ, 2023 ರಲ್ಲಿ ಬಳಸಿದ ವಿದ್ಯುತ್‌ ಬಳಕೆಯನ್ನು ಆಗಸ್ಟ್ 2023 ರಲ್ಲಿ ನೀಡುವ ಬಿಲ್ಲಿಗೆ ಅನ್ವಯವಾಗುವಂತ ಯೋಜನೆಯನ್ನು ಜಾರಿಗೊಳಿಸಲಾಗುವುದು.

5. ಈ ಯೋಜನೆಯನ್ನು ನಾನು ಹೇಗೆ ಮತ್ತು ಎಲ್ಲಿ ಪಡೆಯಬಹುದು? 
ಈ ಯೋಜನೆಯನ್ನು ಪಡೆಯಲು ಕರ್ನಾಟಕ ಸರ್ಕಾರದ ಸೇವಾ ಸಿಂಧು ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸುವುದು. ಇದರ ಲಿಂಕ್ ಅನ್ನು ಶೀಘ್ರದಲ್ಲೇ ಒದಗಿಸಲಾಗುವುದು. ನೋಂದಣಿಯು ಜೂನ್-15 ರಿಂದ ಪ್ರಾರಂಭವಾಗುತ್ತದೆ.

6. ಈ ಯೋಜನೆಯನ್ನು ಆಫ್‌ಲೈನ್ (Offline) ಮೂಲಕ ನಾನು ಪಡೆಯಬಹುದೇ?
ಹೌದು, ಎಲ್ಲಾ ಗೃಹಬಳಕೆ ಗ್ರಾಹಕರಿಗೆ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು.

7. ಈ ಯೋಜನೆ ಪಡೆಯಲು ಯಾವುದೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು?
ಆಧಾರ್ ಸಂಖ್ಯೆ, ವಿದ್ಯುತ್‌ ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ ಖಾತ ಸಂಖ್ಯೆ ಬಾಡಿಗೆ ಭೋಗ್ಯದ ಕರಾರು ಪತ್ರ (ಬಾಡಿಗೆ/ಭೋಗ್ಯದಾರರಾಗಿದ್ದಲ್ಲಿ) ಸಲ್ಲಿಸುವುದು ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ID ಸಲ್ಲಿಸುವುದು.

ಇದನ್ನೂ ಓದಿ: Mungaru male: ಹವಾಮಾನ ಇಲಾಖೆ ಪ್ರಕಟಣೆ: ಕೇರಳಕ್ಕೆ ಪ್ರವೇಶಿಸಿದ ಮುಂಗಾರು.

8. ಅರ್ಜಿ ಸಲ್ಲಿಸುವಾಗ ನಾನು ಶುಲ್ಕ ಪಾವತಿಸಬೇಕೆ?
ಈ ಯೋಜನೆಯಡಿಯಲ್ಲಿ ಯಾವುದೇ ಶುಲ್ಕವನ್ನು ಸೇವಾಸಿಂಧು ಪೋರ್ಟಲ್ ನಲ್ಲಿ ಪಾವತಿಸಬೇಕಾಗಿರುವುದಿಲ್ಲ.

9. ನಾನು ಜೂನ್ ತಿಂಗಳ ವಿದ್ಯುತ್ ಬಿಲ್ಲನ್ನು ಪಾವತಿಸಬೇಕೆ?
ಹೌದು, ಈ ಯೋಜನೆಯು ಜುಲೈ 2023 ತಿಂಗಳ ವಿದ್ಯುತ್ ಬಳಕೆಗೆ ಅನ್ವಯಿಸಲಿದ್ದು, 1 ನೇ ಆಗಸ್ಟ್ 2023 ಹಾಗೂ ನಂತರದ ಮಾಪಕ ಓದುವ ದಿನಾಂಕದಿಂದ ಅನ್ವಯಿಸುತ್ತದೆ.

10. ನನಗೆ ಒಂದಕ್ಕಿಂತ ಹೆಚ್ಚು ವಿದ್ಯುತ್ ಮಾಪಕಗಳಿದ್ದರೆ, ನಾನು ಈ ಯೋಜನೆಗೆ ಅರ್ಹನೇ? 
ಇಲ್ಲ, ಪ್ರತಿ ಗ್ರಾಹಕರು ಒಂದು ಮೀಟರ್ ಗೆ ಮಾತ್ರ ಯೋಜನೆಗೆ ಅರ್ಹರಾಗಿರುತ್ತಾರೆ.

11. ಅರ್ಜಿ ಸಲ್ಲಿಸಿದ ನಂತರ ನಾನು ಯಾವುದೇ ಸ್ವೀಕೃತಿಯನ್ನು ಪಡೆಯುತ್ತೇನೆಯೇ? 
ಹೌದು, ಸೇವಾ ಸಿಂಧುವಿನಿಂದ ಸ್ವೀಕೃತಿ ಸಂದೇಶವನ್ನು ನೋಂದಾಯಿತ ಗ್ರಾಹಕರಿಗೆ ಇಮೇಲ್/ ಮೆಸೇಜ್‌ (SMS) ಮೂಲಕ ಕಳುಹಿಸಲಾಗುತ್ತದೆ.

12. ನಾನು ಈಗಾಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದೇನೆ, ಯೋಜನೆಯ ಲಾಭವು ಯಾವಾಗ ನನ್ನ ಖಾತೆಗೆ ಸೇರಲು ಪ್ರಾರಂಭವಾಗುತ್ತದೆ?
ಜುಲೈ-23 ರಲ್ಲಿ ನೀಡಿದ ಬಿಲ್ ಅನ್ನು ಯೋಜನೆಯ ಲಾಭ ಇಲ್ಲದೆ ಪಾವತಿಸಬೇಕಾಗುತ್ತದೆ. ಯೋಜನೆಯ ಪ್ರಯೋಜನಗಳು ಮೀಟರ್ ಓದುವ ದಿನಾಂಕದಿಂದ ಅಂದರೆ 1ನೇ ಆಗಸ್ಟ್ 2023 ರಂದು ಅಥವಾ ನಂತರ ಅನ್ವಯಿಸುತ್ತದೆ. (ಜುಲೈ 2023 ಬಳಕೆಗಾಗಿ). 

13. ನಾನು ಅಪಾರ್ಟೆಂಟ್ (ವಸತಿ ಸಮುಚ್ಚಯ) ಮಾಲೀಕನಾಗಿದ್ದೇನೆ. ನಾನು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದೇ? 
ಹೌದು, ಪ್ರತ್ಯೇಕ ವಿದ್ಯುತ್ ಮೀಟರ್‌ಗಳು ಲಭ್ಯವಿದ್ದರೆ ಅಥವಾ ಸ್ಥಾಪಿಸಿದ್ದರೆ ಯೋಜನೆಗೆ ಅರ್ಜಿ ಸಲ್ಲಿಸಬಹುದು.

14. ನಾನು ಬಾಡಿಗೆದಾರ: ಬಿಲ್ ಮಾಲೀಕರ ಹೆಸರಿನಲ್ಲಿದೆ, ನನಗೂ ಯೋಜನೆ ಅನ್ವಯವಾಗುವುದೇ?
ಹೌದು, ಆಧಾರ್ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ ಖಾತೆ ಸಂಖ್ಯೆ, ಬಾಡಿಗೆ ಭೋಗ್ಯದ ಕರಾರು ಪತ್ರ (ಬಾಡಿಗೆ/ಭೋಗ್ಯದಾರರಾಗಿದ್ದಲ್ಲಿ ಸಲ್ಲಿಸುವುದು ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ID ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದು.

15. ಯೋಜನೆಯ ಅಡಿಯಲ್ಲಿ ಬಾಡಿಗೆ/ಭೋಗ್ಯದಾರನಾಗಿ ನಾನು ನೋಂದಾಯಿಸಲು ಸಲ್ಲಿಸಬೇಕಾದ ದಾಖಲೆಗಳು ಯಾವುವು? 
ಬಾಡಿಗೆ ಅಥವಾ ಭೋಗ್ಯದಾರರು ವಿಳಾಸ ಪುರಾವೆಯೊಂದಿಗೆ ನೋಂದಾಯಿಸಿಕೊಳ್ಳಬಹುದು. ಸದರಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಆಧಾರ್ ಜೊತೆಗೆ ಬಾಡಿಗೆ/ ಭೋಗ್ಯದ ಕರಾರು ಪತ್ರವನ್ನು ಸಲ್ಲಿಸುವುದು.

16. ನಾನು 2 ತಿಂಗಳ ಹಿಂದೆ ಮನೆಯನ್ನು ಬದಲಾಯಿಸಿದ್ದೇನೆ, ನನಗೆ ಲಾಭ ಸಿಗುತ್ತದೆಯೇ?
ಹೌದು, ಹೊಸ ಸಂಪರ್ಕಕ್ಕಾಗಿ ನಿಯಮಾವಳಿಗಳನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು.

17. ನಾನು ಅಂಗಡಿಯ ಮಾಲೀಕರಾಗಿದ್ದೇನೆ, ನಾನು ಸಹ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದೇ? 
ಇಲ್ಲ, ಗೃಹಬಳಕೆ ದಾರರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.

18. ನಾನು ಎಷ್ಟು ಉಚಿತ ಯೂನಿಟ್ ವಿದ್ಯುತ್‌ಗೆ ಅರ್ಹನಾಗುತ್ತೇನೆ? ತಿಂಗಳಿಗೆ 200 ಯೂನಿಟ್ ಗಳಿಗೆ ನಾನು ಅರ್ಹನೇ? 
2022-23 ರ ಸರಾಸರಿ ವಿದ್ಯುತ್ ಬಳಕೆ + ಶೇಕಡ 10% ಹೆಚ್ಚಳ (ಎರಡು ಸೇರಿಸಿದರೆ ಒಟ್ಟು 200 ಯೂನಿಟ್‌ಗಳಿಗಿಂತ ಒಳಗಿರಬೇಕು) ಸರಾಸರಿ ಬಳಕೆಯ ಆಧಾರದ ಮೇಲೆ ಲಾಭವನ್ನು ಲೆಕ್ಕೀಕರಿಸಲಾಗುತ್ತದೆ.

19. ವಿದ್ಯುತ್ ಬಿಲ್ಲಿನ ಖಾತೆ ಸಂಖ್ಯೆಯನ್ನು ನಾನು ಎಲ್ಲಿ ಹುಡುಕಬೇಕು?
ವಿದ್ಯುತ್ ಬಿಲ್ಲಿನ ಖಾತೆ ಸಂಖ್ಯೆಯು ಪ್ರತಿ ತಿಂಗಳ ವಿದ್ಯುತ್ ಬಿಲ್‌ನಲ್ಲಿ ಲಭ್ಯವಿರುತ್ತದೆ.

20. ಈ ಯೋಜನೆಯನ್ನು ಪಡೆಯಲು ಖಾತೆ ಸಂಖ್ಯೆಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವುದು ಕಡ್ಡಾಯವೇ? 
ಹೌದು, ಗ್ರಾಹಕ ಸಂಖ್ಯೆ/ಖಾತ ಸಂಖ್ಯೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

21. ನನ್ನ ಅಧಾರ್ ಕರ್ನಾಟಕದ ಹೊರಗೆ ನೋಂದಾಯಿಸಲ್ಪಟ್ಟಿದೆ. ನಾನು ಈ ಯೋಜನ ಪಡೆಯಲು ಅರ್ಹನಾಗುತ್ತೇನೆಯೇ?
ಹೌದು, ನೀವು ಕರ್ನಾಟಕದ ವಿಳಾಸ ಪುರಾವೆಯೊಂದಿಗೆ ಕರ್ನಾಟಕದಲ್ಲಿ ಎಲ್ಲಿಯಾದರೂ ವಾಸಿಸುತ್ತಿದ್ದರೆ, ನೀವು ಯೋಜನೆಗೆ ಅರ್ಹರಾಗಿದ್ದೀರಿ. 

22. ನಾನು ವಿದ್ಯುತ್ ಬಿಲ್ ಬಾಕಿಯನ್ನು ಉಳಿಸಿಕೊಂಡಿದ್ದರೆ, ನಾನು ಈ ಯೋಜನೆಗೆ ಅರ್ಹನೇ? 
ಹೌದು, ಆದರೆ ಜೂನ್ 30 ರವರೆಗಿನ ವಿದ್ಯುತ್ ಬಾಕಿಯನ್ನು 3 ತಿಂಗಳೊಳಗೆ ಪಾವತಿಸಬೇಕು. ಪಾವತಿಸದಿದ್ದರೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.

23. ಒಂದು ವೇಳೆ ನಾನು ಈ ಯೋಜನೆಯ ಫಲಾನುಭವಿಯಾಗಿ, ನನಗೆ ನಿಗದಿ ಪಡಿಸಿರುವ ಉಚಿತ ವಿದ್ಯುತ್ ಗಿಂತ ಜಾಸ್ತಿ ಯೂನಿಟ್ ಬಳಸಿದರೆ, ನಾನು ಆ ಹೆಚ್ಚಿನ ಯೂನಿಟ್ ಗಳಿಗೆ ಪಾವತಿಸಬೇಕಾಗುತ್ತದೆ ಎಂಬುದು ನನಗೆ ತಿಳಿದಿದೆ. ಆದರೆ, ಆ ಹೆಚ್ಚಿನ ಯೂನಿಟ್ ಬಳಕೆಯ ಬಿಲ್ಲನ್ನು ಪಾವತಿಸದಿದ್ದರೆ, ನನ್ನನ್ನು ಈ ಯೋಜನೆಯಿಂದ ಅನರ್ಹಗೊಳಿಸಲಾಗುವುದೇ? 
ಇಲ್ಲ. ಬಾಕಿ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಬಾಕಿಯನ್ನು ಪಾವತಿಸಿದ ನಂತರ ಪುನಃ ಈ ಯೋಜನೆಯ ಸೌಲಭ್ಯಗಳನ್ನು ಪಡೆಯಬಹುದು.

24. ವಿದ್ಯುತ್ ಬಿಲ್ ನನ್ನ ದಿವಂಗತ ತಂದೆಯ ಹೆಸರಿನಲ್ಲಿದೆ? ಇದಕ್ಕಾಗಿ ನಾನು ಹೇಗೆ ಅರ್ಜಿ ಸಲ್ಲಿಸಬಹುದು? 
ವಿದ್ಯುತ್ ಸಂಪರ್ಕವನ್ನು ನಿಮ್ಮ ಹೆಸರಿಗೆ ವರ್ಗಾಯಿಸಬೇಕು ಮತ್ತು ತದನಂತರ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಹೆಸರಿನ ಬದಲಾವಣೆಯನ್ನು ಎಲ್ಲಾ ಉಪ ವಿಭಾಗಗಳಲ್ಲಿನ ಜನ ಸ್ನೇಹಿ ವಿದ್ಯುತ್ ಸೇವಾ ಕೌಂಟರ್‌ಗಳಲ್ಲಿ ಮಾಡಲಾಗುತ್ತದೆ.

25. ನನ್ನ ಮಾಸಿಕ ಬಳಕೆಯು 200 ಯೂನಿಟ್‌ಗಳಿಗಿಂತ ಹೆಚ್ಚಿದ್ದರೆ, ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕೇ? 
ಹೌದು. ಆ ನಿರ್ದಿಷ್ಟ ತಿಂಗಳಿಗೆ ಮಾತ್ರ ನೀವು ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ.

26. ನನ್ನ ವಿದ್ಯುತ್ ಬಳಕೆಯು ಉಚಿತ ಯೂನಿಟ್ ಗಳಿಗಿಂತ ಕಡಿಮೆಯಿದ್ದರೆ, ಬಿಲ್ ಮೊತ್ತ ಏನಾಗುತ್ತದೆ? 
ವಿದ್ಯುತ್ ಬಳಕೆಯು ಅರ್ಹ 200 ಯೂನಿಟ್ ಗಳಿಗಿಂತ ಕಡಿಮೆಯಿದ್ದರೆ ನೀವು 'ಶೂನ್ಯ ಬಿಲ್' ಪಡೆಯುತ್ತೀರಿ.

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: