e-Swathu Application: ಕೃಷಿ ಜಮೀನಿನಲ್ಲಿ ಕಟ್ಟಿದ ಕಟ್ಟಡ ಮನೆಗೆ ಇ-ಸ್ವತ್ತು ಪಡೆಯಲು ಅವಕಾಶ!

November 18, 2026 | Siddesh
e-Swathu Application: ಕೃಷಿ ಜಮೀನಿನಲ್ಲಿ ಕಟ್ಟಿದ ಕಟ್ಟಡ ಮನೆಗೆ ಇ-ಸ್ವತ್ತು ಪಡೆಯಲು ಅವಕಾಶ!
Share Now:

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಳ್ಳಿಗಳಲ್ಲಿ ಮನೆ ಮತ್ತು ಕಟ್ಟಡಗಳನ್ನು ಕಟ್ಟಿಕೊಂಡಿರುವ ಜನರು ಆ ಆಸ್ತಿಯ ಮೇಲೆ ತಮ್ಮ ಹಕ್ಕನು ಪ್ರತಿಪಾದಿಸಲು ಇ-ಸ್ವತ್ತು ದಾಖಲೆಯನ್ನು ಹೊಂದಿರುವುದು ಕಡ್ಡಾಯವಾಗಿದ್ದು ಪ್ರಸ್ತುತ ಇ-ಸ್ವತ್ತನ್ನು ಪಡೆಯುವ ನಿಯಮದಲ್ಲಿ ಸಡಿಲಿಕೆಯನ್ನು ನೀಡಲಾಗಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ಗ್ರಾಮಾಂತರ ಭಾಗದಲ್ಲ್ಲಿರುವ ಆಸ್ತಿಗಳಿಗೆ ಇ-ಸ್ವತ್ತು ವಿತರಣೆಗೆ ಸಂಬಂಧಪಟ್ಟಂತೆ ಪ್ರಸ್ತುತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಗುತ್ತಿರುವ ವಿಳಂಬ ನಿವಾರಣೆಗೆ ನಿಯಮಗಳ ತಿದ್ದುಪಡಿ ಮಾಡಲಾಗಿದ್ದು, ಡಿಸೆಂಬರ್ 31ರೊಳಗೆ 8 ಲಕ್ಷ ಗ್ರಾಮಠಾಣಾ ಆಸ್ತಿಗಳಿಗೆ ಇ-ಸ್ವತ್ತು ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಇದನ್ನೂ ಓದಿ: BPL Ration Card-ಪ್ರತಿ ತಿಂಗಳು ರೇಶನ್ ಪಡೆಯಲು ನ್ಯಾಯಬೆಲೆ ಅಂಗಡಿ ಆಯ್ಕೆಗೆ ನೂತನ ವ್ಯವಸ್ಥೆ ಜಾರಿ!

ಈ ಸಂಬಂದ ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಭೂಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 1,50,69,090 ಕೋಟಿ ಗ್ರಾಮೀಣ ಆಸ್ತಿ ಇದ್ದು, ಈ ಪೈಕಿ ಈಗಾಗಲೇ 42,92,484 ಆಸ್ತಿಗಳಿಗೆ ನಮೂನೆ 11 ಹಾಗೂ 10,16,730 ಸ್ವತ್ತುಗಳಿಗೆ ನಮೂನೆ ಬಿ ವಿತರಿಸಲಾಗಿದೆ. ಇನ್ನೂ 97,59,867 ಆಸ್ತಿಗಳಿಗೆ ಇ-ಸ್ವತ್ತು ನೀಡಬೇಕಾಗಿದ್ದು, ವ್ಯಾಜ್ಯ ರಹಿತ, ಸರ್ಕಾರಿ, ಅರಣ್ಯ ಭೂಮಿಯಲ್ಲಿಲ್ಲದ 80 ಲಕ್ಷ ಗ್ರಾಮೀಣ ಆಸ್ತಿಗಳಿಗೆ ಮುಂದಿನ ವರ್ಷಾಂತ್ಯದೊಳಗೆ ಅಂದರೆ 2027ರ ಡಿಸೆಂಬರ್ 31ರ ಒಳಗಾಗಿ ಇ-ಸ್ವತ್ತು ನೀಡಲು 5927 ಗ್ರಾಮ ಪಂಚಾಯತಿಗಳಿಗೂ ಗುರಿ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.

e-Swathu Importance-ಇ-ಸ್ವತ್ತು ಏಕೆ ಮುಖ್ಯ?

ಗ್ರಾಮೀಣ ಭಾಗದ ಅನೇಕ ನಾಗರಿಕರೆ ಇ-ಸ್ವತ್ತು ಬಗ್ಗೆ ಅಗತ್ಯ ಮಾಹಿತಿ ಇರುವುದಿಲ್ಲ ಈ ದಾಖಲೆಯ ಕುರಿತು ಒಂದಿಷ್ಟು ಮಾಹಿತಿ ಇಲ್ಲಿ ತಿಳಿಸಲಾಗಿದೆ:

  • ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವ ಮುನ್ನ ಅಥವಾ ಬಳಿಕ ಈ ಆಸ್ತಿಯ ಮೇಲೆ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಇ-ಸ್ವತ್ತು ದಾಖಲೆ ಇದ್ದಲ್ಲಿ ಮಾತ್ರ ಸಾಲವನ್ನು ಪಡೆಯಬಹುದು.
  • ಕಟ್ಟಡ ಮತ್ತು ಮನೆಗೆ ವಿದ್ಯುತ್ ಸಂಪರ್ಕವನ್ನು ಪಡೆಯಲು ಈ ದಾಖಲೆ ಅವಶ್ಯಕ.
  • ವಿವಿಧ ಸಹಾಯಧನ ಆಧಾರಿತ ಯೋಜನೆಯ ಪ್ರಯೋಜನವನ್ನು ಪಡೆಯಲು ಇ-ಸ್ವತ್ತು ಅವಶ್ಯಕ.
  • ಆಸ್ತಿಯ ಮಾಲೀಕತ್ವವನ್ನು ಸಾಬೀತುಪಡಿಸಲು ಈ ದಾಖಲೆ ಅವಶ್ಯಕ.

ಇದನ್ನೂ ಓದಿ: Agriculture Subsidy Scheme-ಕೃಷಿ ಇಲಾಖೆಯಿಂದ ವಿವಿಧ ಯಂತ್ರಗಳ ಖರೀದಿಗೆ ಶೇ 50% ಸಬ್ಸಿಡಿ!ಇಲ್ಲಿದೆ ಸಂಪೂರ್ಣ ಮಾಹಿತಿ!

Bhoo Guarantee Yojane-ಸರ್ಕಾರದಿಂದ ಭೂ-ಗ್ಯಾರಂಟಿ ಯೋಜನೆ: ಸಚಿವ ಈಶ್ವರ ಖಂಡ್ರೆ

ರಾಜ್ಯದಲ್ಲಿ ಶೇ.61ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿದ್ದು, ಇ-ಸ್ವತ್ತು ಪಡೆಯುವಲ್ಲಿ ಸಾಕಷ್ಟು ವಿಳಂಬ ಆಗುತ್ತಿತ್ತು. ಈ ತೊಡಕು ನಿವಾರಿಸಲು ತಾವು ಸಚಿವರಾದ ಬಳಿಕ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ಬೆಂಗಳೂರು ನಗರ, ಮಂಗಳೂರು, ಕಲ್ಬುರ್ಗಿ ಮತ್ತು ಬೆಳಗಾವಿ ಜಿಲ್ಲಾ ಪಂಚಾಯತಿಗಳ ಸಿಇಓಗಳನ್ನು ಒಳಗೊಂಡ ಪಂಚ ಸದಸ್ಯರ ಸಮಿತಿ ರಚಿಸಿ, ಸಮಿತಿಯ ಶಿಫಾರಸಿನಂತೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025ಕ್ಕೆ ತಿದ್ದುಪಡಿ ತರಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಸುರಕ್ಷಿತ, ನಿಖರ, ಡಿಜಟಲೀಕರಿಸಿದ ಮತ್ತು ಭೌಗೋಳಿಕವಾಗಿ ಉಲ್ಲೇಖಿಸಲಾದ ಭೂಮಿ ಮತ್ತು ಆಸ್ತಿ ದಾಖಲೆಗಳನ್ನು ವಿತರಿಸಲು ಭೂ-ಗ್ಯಾರಂಟಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ 5927 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಿಶೇಷವಾಗಿ ಗ್ರಾಮಠಾಣ ಪ್ರದೇಶದಲ್ಲಿ ಇ-ಸ್ವತ್ತು ನೀಡಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: Janaushadhi Kendra-ಜನೌಷಧಿ ಕೇಂದ್ರ ತೆರೆಯಲು ಅರ್ಜಿ ಆಹ್ವಾನ! ಸ್ವಂತ ಉದ್ಯಮ ಆರಂಭಿಸಲು ಸುವರ್ಣಾವಕಾಶ!

ಅದೇ ರೀತಿ ಕಂದಾಯ ಭೂಮಿಯಲ್ಲಿ ಅಭಿವೃದ್ಧಿ ಪಡಿಸಲಾದ ಪರಿವರ್ತನೆ ಆದ ಭೂಮಿ ಮತ್ತು ಪರಿವರ್ತನೆ ಆಗದ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೂ ಇ-ಸ್ವತ್ತು ನೀಡಲು ಕ್ರಮ ವಹಿಸಲಾಗಿದೆ. ಇದರಲ್ಲಿ ಮೊದಲ ಹಂತದಲ್ಲಿ ಪರಿವರ್ತನೆ ಆದ ಭೂಮಿಯಲ್ಲಿ ಅಭಿವೃದ್ಧಿ ಪಡಿಸಲಾದ ಬಿ ಖರಾಬು ಭೂಮಿ ಇಲ್ಲದ ಸರ್ವೆ ನಂಬರ್ ಸ್ವತ್ತುಗಳಿಗೂ ಇ-ಸ್ವತ್ತು ನೀಡಲಾಗುವುದು. ನಂತರ ಭೂಪರಿವರ್ತನೆ ಆಗದ ಭೂಮಿಯ ಸ್ವತ್ತಿಗೂ ಇ-ಸ್ವತ್ತು ನೀಡಲು ಕೆಲವೇ ತಿಂಗಳುಗಳಲ್ಲಿ ನಿಯಮಗಳಿಗೆ ಮಾರ್ಪಾಡು ಮಾಡಿ, ಕ್ರಮ ವಹಿಸಲಾಗುವುದು ಎಂದರು.

ಹಲವರು ತಲೆಮಾರುಗಳಿಂದ, ದಶಕಗಳಿಂದ ಗ್ರಾಮಠಾಣಾ ವ್ಯಾಪ್ತಿಯಲ್ಲಿ ತಮ್ಮ ಆಸ್ತಿಯಲ್ಲೇ ವಾಸಿಸುತ್ತಿದ್ದಾರೆ. ಆದರೆ ಇವರ ಆಸ್ತಿಯ ದಾಖಲೆಗಳು ಪ್ರವಾಹ, ಮಳೆ, ಬೆಂಕಿ ಅನಾಹುತದಲ್ಲಿ ಹಾಳಾಗಿದ್ದರೆ, ಮತ್ತೆ ಕೆಲವರ ಆಸ್ತಿ ದಾಖಲೆ ಗೆದ್ದಲು ತಿಂದು ಹೋಗಿದೆ. ದಾಖಲೆಗಳು ಲಭ್ಯವಿಲ್ಲದವರಿಗೆ 07.04.2025 ರ ಪೂರ್ವದಲ್ಲಿನ ವಿದ್ಯುತ್‌ ಬಿಲ್ ಆಧಾರದ ಮೇಲೆ ಮತ್ತು ಸ್ಥಳ ಮಹಜರು ಮಾಡಿ, ಆಕ್ಷೇಪಣೆ ಸಲ್ಲಿಸಲು 21 ದಿನ ಅವಕಾಶ ನೀಡಿ ನಂತರ ಇ-ಸ್ವತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ: Anganwadi Worker-ಅಂಗನವಾಡಿಯಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದು ಹೇಗೆ! ಇಲ್ಲಿದೆ ಸಂಪೂರ್ಣ ಮಾಹಿತಿ!

ಕಣಮನೆ, ಮನದಳ ಆಸ್ತಿಗೂ ಇ-ಸ್ವತ್ತು:

ಮಲೆನಾಡು ಭಾಗದ ಜನರ ವಾಸಸ್ಥಳಗಳ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಕಣ ಮನೆ ಮತ್ತು ಮನೆದಳ ಆಸ್ತಿಗಳಿಗೂ ಇ-ಸ್ವತ್ತು ನೀಡಲು ಅವಕಾಶ ಕಲ್ಪಿಸಲಾಗಿದೆ. ಕೃಷಿ ಜಮೀನಿನಲ್ಲಿ ವಾಸಕ್ಕಾಗಿ ಅಥವಾ ಕೃಷಿ ಉದ್ದೇಶಕ್ಕಾಗಿ ನಿರ್ಮಿಸಿಕೊಂಡಿರುವ ಕಟ್ಟಡಗಳಿಗೆ ನೋಂದಾಯಿತ ದಾಖಲೆಗಳಿಲ್ಲದಿದ್ದರೂ, ನಿಯಮಾನುಸಾರ ಇ-ಸ್ವತ್ತು ದಾಖಲೆಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ. 4000 ಚದರಡಿಯವರೆಗಿನ ಸ್ವತ್ತಿಗೆ ಈ ಸೌಲಭ್ಯ ಲಭಿಸಲಿದೆ ಎಂದರು.

e-Swathu Portal-ಇ-ಸ್ವತ್ತು 3.0 ತಂತ್ರಾಂಶ ಶೀಘ್ರ:

ಇ-ಸ್ವತ್ತು ಅಭಿಯಾನದ ಯಶಸ್ವಿ ಅನುಷ್ಠಾನಕ್ಕಾಗಿ ಇ-ಸ್ವತ್ತು 2.0 ತಂತ್ರಾಂಶ ಜಾರಿಯಲ್ಲಿದೆ. ಆದರೆ ಎಲ್ಲ ಗ್ರಾಮೀಣ ಆಸ್ತಿಗಳನ್ನೂ ಸುರಕ್ಷಿತಗೊಳಿಸಲು ಮತ್ತು ಸರ್ಕಾರಿ ಆಸ್ತಿಗೆ, ಬಿ ಖರಾಬು ಭೂಮಿಗೆ ಇ-ಸ್ವತ್ತು ನೀಡುವುದನ್ನು ತಡೆಯಲು ಕಂದಾಯ ಇಲಾಖೆಯ ತಂತ್ರಾಂಶದ ಮಾಹಿತಿಯನ್ನು ಸ್ವಯಂಚಾಲಿತವಾಗಿ ಪಡೆಯುವಂತೆ ಇ-ಸ್ವತ್ತು 03 ತಂತ್ರಾಂಶ ಅಭಿವೃದ್ದಿ ಪಡಿಸಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Bangalore Krishi Mela-2026: ಇಂದಿನಿಂದ 3 ದಿನ ಜಿ.ಕೆ.ವಿ.ಕೆ.ಯಲ್ಲಿ ಕೃಷಿಮೇಳ!

ಗ್ರಾಮೀಣ ಪ್ರದೇಶದಲ್ಲಿನ ಜಮೀನುಗಳ ಅಳತೆ ಅಂದರೆ ಸರ್ವೆಯಲ್ಲಿಯೂ ಸಮಸ್ಯೆ ಇದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿಯೇ ಪ್ರತ್ಯೇಕ ಮೋಜಣಿ ವಿಭಾಗ ಆರಂಭಿಸಲು ಮತ್ತು ಸಿಬ್ಬಂದಿಗೆ ತರಬೇತಿ ನೀಡಿ ರೋವರ್ ಗಳ ಮೂಲಕ ಸರ್ವೆ ಮಾಡಲು ಕಾರ್ಯಯೋಜನೆ ರೂಪಿಸಲಾಗುತ್ತಿದ್ದು, ಇದನ್ನು ಶೀಘ್ರವೇ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಅಧಿಕಾರಿ ಸಿಬ್ಬಂದಿಗೆ ಸೂಚನೆ:

ರಾಜ್ಯ ಸರ್ಕಾರ ಗ್ರಾಮೀಣ ಜನರಿಗೆ ಅವರ ಆಸ್ತಿಯ ಹಕ್ಕು ಕೊಡಿಸಲು ಭೂ ಗ್ಯಾರಂಟಿ ಇ-ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡಿದ್ದು, ಜನರಿಗೆ ಸಮಸ್ಯೆ ಆಗದಂತೆ ಮತ್ತು ಸರ್ಕಾರಿ ಆಸ್ತಿಯ ಸಂರಕ್ಷಣೆಯ ಜವಾಬ್ದಾರಿಯೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಪ್ರಾಮಾಣಿಕತೆ, ದಕ್ಷತೆ ಮತ್ತು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

e-swathu Helpline Number-ಇ-ಸ್ವತ್ತು ಸಹಾಯವಾಣಿ:

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇ-ಸ್ವತ್ತು ದಾಖಲೆಯನ್ನು ಪಡೆಯುವ ಸಮಯದಲ್ಲಿ ಯಾವುದೇ ರೀತಿಯ ತಾಂತ್ರಿಕ ತೊಡಕಾದರೆ ಸಾರ್ವಜನಿಕರು ಈ ಸಹಾಯವಾಣಿ 9483476000 ಸಂಖ್ಯೆಗೆ ಸಂಪರ್ಕಿಸಬಹುದು ಎಂದೂ ತಿಳಿಸಿದ್ದಾರೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: