Karnataka Budget 2026-ರಾಜ್ಯ ಬಜೆಟ್ 2026-27: ಕೃಷಿ ಮತ್ತು ಮೂಲಸೌಕರ್ಯಕ್ಕೆ ಬಂಪರ್ ಕೊಡುಗೆ; ಜಿಲ್ಲಾವಾರು ಹಂಚಿಕೆಯ ಸಮಗ್ರ ವಿವರ!

March 6, 2026 | Siddesh
Karnataka Budget 2026-ರಾಜ್ಯ ಬಜೆಟ್ 2026-27: ಕೃಷಿ ಮತ್ತು ಮೂಲಸೌಕರ್ಯಕ್ಕೆ ಬಂಪರ್ ಕೊಡುಗೆ; ಜಿಲ್ಲಾವಾರು ಹಂಚಿಕೆಯ ಸಮಗ್ರ ವಿವರ!
Share Now:

ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಗುರಿಯೊಂದಿಗೆ ಮಂಡನೆಯಾಗಿರುವ 2026-27ನೇ ಸಾಲಿನ ಆಯವ್ಯಯವು ಕೃಷಿ, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. "ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ" ಎಂಬ ಘೋಷವಾಕ್ಯದೊಂದಿಗೆ ಮಂಡಿತವಾಗಿರುವ ಈ ಬಜೆಟ್‌ನಲ್ಲಿ ರೈತರ ಆದಾಯ ವೃದ್ಧಿ ಮತ್ತು ಗ್ರಾಮೀಣ ಮೂಲಸೌಕರ್ಯ ಬಲಪಡಿಸಲು ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ವಿಶೇಷವಾಗಿ ಕೃಷಿ ವಲಯದಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಉತ್ಪಾದನೋತ್ತರ ಚಟುವಟಿಕೆಗಳಿಗೆ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.

ನೀರಾವರಿ ಕ್ಷೇತ್ರದಲ್ಲಿ ದಶಕಗಳ ಕಾಲದ ಕನಸಾದ ಮೇಕೆದಾಟು ಮತ್ತು ಎತ್ತಿನಹೊಳೆ ಯೋಜನೆಗಳಿಗೆ ವೇಗ ನೀಡಲು ನಿರ್ಧರಿಸಲಾಗಿದ್ದು, ಜಲಸಂಪನ್ಮೂಲ ಇಲಾಖೆಗೆ ಭಾರಿ ಮೊತ್ತದ ಅನುದಾನ ಲಭಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಅಂತರ್ಜಲ ವೃದ್ಧಿಗೆ ಸರ್ಕಾರ ಸಂಕಲ್ಪ ಮಾಡಿದೆ. ಇದರೊಂದಿಗೆ ಸಹಕಾರ ಇಲಾಖೆಯ ಮೂಲಕ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 30,000 ಕೋಟಿ ರೂ.ಗಳ ಸಾಲ ವಿತರಿಸುವ ಬೃಹತ್ ಗುರಿಯನ್ನು ಹೊಂದಲಾಗಿದೆ.

ಇದನ್ನೂ ಓದಿ: Journalists Training-ಮಹಿಳಾ ಪತ್ರಕರ್ತೆಯರಿಗೆ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಹೈಟೆಕ್ ತರಬೇತಿಗೆ ಅರ್ಜಿ ಆಹ್ವಾನ!

ಇಲಾಖಾವಾರು ಹಂಚಿಕೆಯಲ್ಲಿ ಶಿಕ್ಷಣ, ಆರೋಗ್ಯ ಮತ್ತು ಸಾರಿಗೆ ಕ್ಷೇತ್ರಗಳಿಗೂ ಹೆಚ್ಚಿನ ಮಾನ್ಯತೆ ಸಿಕ್ಕಿದೆ. ಶಕ್ತಿ ಯೋಜನೆಗೆ 5,300 ಕೋಟಿ ರೂ. ಹಾಗೂ ಗೃಹಜ್ಯೋತಿ ಯೋಜನೆಗೆ 10,578 ಕೋಟಿ ರೂ. ಮೀಸಲಿಡುವ ಮೂಲಕ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಲಾಗಿದೆ. ಅಲ್ಲದೆ, ರಾಜ್ಯದಾದ್ಯಂತ 800 ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ ಮತ್ತು ಗೃಹ ಇಲಾಖೆಯಲ್ಲಿ 8,000 ಹುದ್ದೆಗಳ ಭರ್ತಿಯಂತಹ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.

ಇಲಾಖಾವಾರು ಅನುದಾನ ಹಂಚಿಕೆ ವಿವರ:

ಜಲಸಂಪನ್ಮೂಲ ಇಲಾಖೆ:

  • *ಮೇಕೆದಾಟು ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಯನ್ನು (DPR) ಶೀಘ್ರವೇ ಸಿದ್ಧಪಡಿಸಿ ಅನುಮೋದನೆಗೆ ಹಾಗೂ ಅರಣ್ಯ ಪ್ರದೇಶದ ಬಳಕೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು
  • *ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ ಹಂತದಲ್ಲಿ ಬಾಕಿ ಇರುವ 18.73 ಕಿ.ಮೀ ಉದ್ದದ ಕಾಲುವೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು. ಹೆಚ್ಚುವರಿಯಾಗಿ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಳ್ಳಲು ಕೊರಟಗೆರೆ ತಾಲೂಕಿನ ವಡೇರಹಳ್ಳಿ ಸಮೀಪ 1.2 ಟಿ.ಎಂ.ಸಿ. ಸಾಮರ್ಥ್ಯದ ಸಮತೋಲನಾ ಜಲಾಶಯವನ್ನು ನಿರ್ಮಿಸಲಾಗುವುದು
  • *ಚಾಮರಾಜನಗರದ ಹನೂರು ತಾಲೂಕಿನಲ್ಲಿ ಅಂತರ್ಜಲ ವೃದ್ಧಿ ಹಾಗೂ 12 ಸಾವಿರ ಎಕರೆ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಲು ರೂ.490 ಕೋಟಿ ವೆಚ್ಚದಲ್ಲಿ ಉಡುತೊರೆಹಳ್ಳ ಯೋಜನೆ ಅನುಷ್ಠಾನ
  • *ವಿಜಯಪುರ ಜಿಲ್ಲೆಯ ಬಾಬಾ ನಗರದಲ್ಲಿ 0.67 ಟಿಎಂಸಿ ಸಾಮರ್ಥ್ಯದ ಸಂಗ್ರಹಣಾ ಜಲಾಶಯವನ್ನು ತುಬಚಿ - ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ನಿರ್ಮಿಸಲು ತಾತ್ವಿಕ ಅನುಮೋದನೆ
  • ಕೃಷ್ಣಾ, ಕಾವೇರಿ, ಗೋದಾವರಿ ಹಾಗೂ ಇತರೆ ನದಿ ಕಣಿವೆಗಳಲ್ಲಿ ಒಟ್ಟಾರೆ ರೂ. 8,045 ಕೋಟಿ ಮೊತ್ತದ 75 ನೀರಾವರಿ ಕಾಮಗಾರಿಗಳ ಅನುಷ್ಠಾನ

ಇದನ್ನೂ ಓದಿ: Shop Insurance-ಅತೀ ಕಡಿಮೆ ಪ್ರೀಮಿಯಂ ನಲ್ಲಿ ಅಂಗಡಿ ಮಾಲೀಕರಿಗೆ ವಿಮೆ!

ಸಣ್ಣ ನೀರಾವರಿ ಇಲಾಖೆ:

  • ರೂ.237 ಕೋಟಿ ಅಂದಾಜು ವೆಚ್ಚದಲ್ಲಿ ಹೆಬ್ಬಾಳ - ನಾಗವಾರ ಕಣಿವೆಯ ಮೂರನೇ ಹಂತದಲ್ಲಿ ಶಿಡ್ಲಘಟ್ಟದ ಅಮಾನಿ ಕೆರೆಯಿಂದ ಶಿಡ್ಲಘಟ್ಟ ತಾಲೂಕಿನ 45 ಕೆರೆಗಳಿಗೆ ಮತ್ತು ಚಿಂತಾಮಣಿ ತಾಲೂಕಿನ 119 ಕೆರೆಗಳೂ ಸೇರಿ ಒಟ್ಟಾರೆ 164 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಅನುಷ್ಠಾನ
  • ರೂ.140 ಕೋಟಿ ಅಂದಾಜು ಮೊತ್ತದಲ್ಲಿ ಹೆಚ್‌.ಎನ್‌ ವ್ಯಾಲಿ ಯೋಜನೆಯಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಹೊಸಕೋಟೆ ತಾಲೂಕಿನ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಗಳ 59 ಕೆರೆಗಳಿಗೆ ಏತ ನೀರಾವರಿ ಮೂಲಕ ತುಂಬಿಸುವ ಕಾಮಗಾರಿಯ ಅನುಷ್ಠಾನ
  • ರೂ.650 ಕೋಟಿ ವೆಚ್ಚದಲ್ಲಿ ಬೆಂಗಳೂರು ನಗರದ ವೃಷಭಾವತಿ ವ್ಯಾಲಿಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 308 ಎಂಎಲ್‌ಡಿ ನೀರನ್ನು ಗೋಪಾಲಪುರ ಕೆರೆಯಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲೂಕಿನ 41 ಕೆರೆಗಳನ್ನು ತುಂಬಿಸುವ ಯೋಜನೆಯ ಅನುಷ್ಠಾನ
  • ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರು ಹಾಗೂ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಜಿಡಗಾದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಕೆರೆಗಳ ಆಧುನೀಕರಣ, ಅಣೆಕಟ್ಟು, ಪಿಕ್‌-ಅಪ್‌ & ಚೆಕ್‌ ಡ್ಯಾಂ ನಿರ್ಮಾಣ

ಸಹಕಾರ ಇಲಾಖೆ:

  • •ಪ್ರಸಕ್ತ ಸಾಲಿನಲ್ಲಿ 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 30,000 ಕೋಟಿ ರೂ. ಕೃಷಿ ಸಾಲ ವಿತರಿಸುವ ಗುರಿ
  • •ಸಹಕಾರ ಸಂಘಗಳ ನಿಬಂಧಕರ ಹಂತದಲ್ಲಿ ವಿವಿಧ ಸೇವೆಗಳನ್ನು (ಕಾಯ್ದೆಗಳು) ಜನಸಾಮಾನ್ಯರಿಗೆ ಸುಲಭವಾಗಿ ಒದಗಿಸಲು ದತ್ತಾಂಶವನ್ನು ಆನ್‌ಲೈನ್‌ನಲ್ಲಿ ನಿರ್ವಹಿಸಲು ಕ್ರಮ
  • •ಪ್ರಸಕ್ತ ಸಾಲಿನಲ್ಲಿ ಮೈಸೂರು (ಬಂಬೂ ಬಜಾರ್‌) ಮತ್ತು ಹುಬ್ಬಳ್ಳಿ (ಕಾಟನ್‌ ಮಾರ್ಕೆಟ್‌) ಕೇಂದ್ರಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ
  • •ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾರ್ಯಚಟುವಟಿಕೆಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲು 10 ಕೋಟಿ ರೂ. ವೆಚ್ಚದಲ್ಲಿ ERP (Enterprise Resource Planning) ವ್ಯವಸ್ಥೆ ಜಾರಿ

ಇದನ್ನೂ ಓದಿ: Yashaswini Card-2026: ಯಶಸ್ವಿನಿ ಕಾರ್ಡ ನೊಂದಣಿ ಆರಂಭ! ಕೂಡಲೇ ಅರ್ಜಿ ಸಲ್ಲಿಸಿ!

ಮೀನುಗಾರಿಕೆ ಇಲಾಖೆ:

  • ಮೀನುಗಾರರಿಗೆ ಉಚಿತವಾಗಿ ನೀಡುವ ಮೀನುಗಾರಿಕೆ ಸಲಕರಣೆ ಕಿಟ್‌ ದರ 10,000 ರೂ.ಗಳಿಂದ 20,000 ರೂ.ಗಳಿಗೆ ಹೆಚ್ಚಳ
  • ಜೈವಿಕ ತಂತ್ರಜ್ಞಾನದ ಉದ್ಯಮಗಳು, ನವೀನ ತಂತ್ರಜ್ಞಾನದ ಅಭಿವೃದ್ಧಿ ಮತ್ತು ಸಮುದ್ರ ಕೃಷಿಯನ್ನು ಪ್ರೋತ್ಸಾಹಿಸಲು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಸೆಂಟರ್‌ ಆಫ್‌ ಎಕ್ಸಲೆನ್ಸ್ ಸ್ಥಾಪನೆ
  • ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರಿನಲ್ಲಿ ಮತ್ಸ್ಯದರ್ಶಿನಿಗಳ ಸ್ಥಾಪನೆ
  • ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮೀನು ಮಾರುಕಟ್ಟೆಯನ್ನು ನಿರ್ಮಿಸಲಾಗುವುದು.

ಪಶುಸಂಗೋಪನೆ:

  • 2026-27 ನೇ ಸಾಲಿನಲ್ಲಿ ನಬಾರ್ಡ್‌ ಸಹಯೋಗದೊಂದಿಗೆ 100 ಹೊಸ ಪಶು ವೈದ್ಯಕೀಯ ಕಟ್ಟಡಗಳ ನಿರ್ಮಾಣ
  • ರೂ.10 ಕೋಟಿ ವೆಚ್ಚದಲ್ಲಿ 15 ತಾಲೂಕು ಪಶು ಆಸ್ಪತ್ರೆಗಳು ಪಾಲಿಕ್ಲಿನಿಕ್‌ಗಳಾಗಿ ಮೇಲ್ದರ್ಜೆಗೆ
  • ಸ್ಥಳೀಯ ಮೇಕೆ ತಳಿಗಳ ಉನ್ನತೀಕರಣಕ್ಕಾಗಿ ಮೈಸೂರಿನಲ್ಲಿ ಬೋಯರ್‌ ಮೇಕೆ ತಳಿ ಸಂವರ್ಧನಾ ಕೇಂದ್ರವನ್ನು ಸ್ಥಾಪನೆ
  • ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆಗಳನ್ನು ನಿವಾರಿಸಲು ʼವರ್ಷಕ್ಕೊಂದು ಕರುʼ ಎಂಬ ಘೋಷವಾಕ್ಯದೊಂದಿಗೆ ರೂ.5 ಕೋಟಿ ವೆಚ್ಚದಲ್ಲಿ ರಾಜ್ಯದ 1,000 ಗ್ರಾಮ ಪಂಚಾಯಿತಿಗಳಲ್ಲಿ ʼಫಲಧಾರೆʼ ಶಿಬಿರಗಳ ಆರಂಭ

ಇದನ್ನೂ ಓದಿ: Gas Level Check-ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ!

ರೇಷ್ಮೆ ಇಲಾಖೆ:

  • ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉತ್ಪಾದಿಸುವ ರೇಷ್ಮೆಗೂಡನ್ನು ಸರ್ಕಾರದ ಯಾವುದೇ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಪ್ರತಿ ಕೆ.ಜಿ. ಗೂಡಿಗೆ ಇರುವ 10 ರೂ. ಸಾಗಾಣಿಕಾ ವೆಚ್ಚ 20 ರೂ.ಗೆ ಹೆಚ್ಚಳ
  • ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ (ಮೈಸೂರು) ಹಾಗೂ ಕಲಬುರಗಿಯಲ್ಲಿ ಸಿಲ್ಕ್‌ ಪಾರ್ಕ್‌ಗಳ ಸ್ಥಾಪನೆ
  • ರೇಷ್ಮೆ ಇಲಾಖೆಯ ಆಯ್ದ ಕ್ಷೇತ್ರಗಳಲ್ಲಿ ಲಭ್ಯವಿರುವ ಜಮೀನಿನಲ್ಲಿ ರೈತ ಉದ್ಯಮಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಸಹಯೋಗದೊಂದಿಗೆ ಚಾಕಿ ಸಾಕಾಣಿಕೆ ಕೇಂದ್ರಗಳ ಸ್ಥಾಪನೆ.

ತೋಟಗಾರಿಕೆ ಇಲಾಖೆ:

  • ಉತ್ಕೃಷ್ಟ ಮೌಲ್ಯದ ತೋಟಗಳ ಅಭಿವೃದ್ಧಿ, ಕೊಯ್ಲೋತ್ತರ ಸೌಲಭ್ಯಗಳು ಹಾಗೂ ತೋಟಗಾರಿಕೆ ಆಧಾರಿತ ಕೈಗಾರಿಕೆಗಳು ಪಿಪಿಪಿ ಮಾದರಿಯಲ್ಲಿ ಸ್ಥಾಪನೆ
  • ಅಡಿಕೆ ಬೆಳೆಯ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳ ಮತ್ತು ತೆಂಗು ಬೆಳೆಯ ಕಪ್ಪು ತಲೆ ಹುಳು ಹಾಗೂ ಬಿಳಿ ನೊಣಗಳ ನಿಯಂತ್ರಣಕ್ಕಾಗಿ ₹10 ಕೋಟಿ ವೆಚ್ಚದಲ್ಲಿ ಸಮುದಾಯ ಆಧಾರಿತ ರೋಗ - ಕೀಟ ನಿಯಂತ್ರಣ ಕ್ರಮಗಳ ಜಾರಿ
  • ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗಾಗಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಮತ್ತು ವಿಜಯಪುರ ಜಿಲ್ಲೆಯ ತೊರವಿಯಲ್ಲಿ ರೂ.64 ಕೋಟಿ ವೆಚ್ಚದಲ್ಲಿ ಒಟ್ಟು 12,000 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಎರಡು ಶೀತಲಗೃಹಗಳ ಸ್ಥಾಪನೆ
  • ಹೆಚ್ಚಿನ ಪ್ರವಾಸಿಗರನ್ನು ಹಾಗೂ ಪರಿಸರ ಪ್ರೇಮಿಗಳನ್ನು ಆಕರ್ಷಿಸುವ ದೃಷ್ಟಿಯಿಂದ ಮೈಸೂರಿನ ಲಿಂಗಾಂಬುಧಿ ಸಸ್ಯ ತೋಟದ ಸಮಗ್ರ ಅಭಿವೃದ್ಧಿ

ಕೃಷಿ ಇಲಾಖೆ:

  • ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನ ಜಿಲ್ಲಾ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ʼಕೃಷಿ ಉದ್ದಿಮೆ ತರಬೇತಿ ಕೇಂದ್ರʼವಾಗಿ ಉನ್ನತೀಕರಣ
  • ಸಣ್ಣ, ಅತೀ ಸಣ್ಣ ರೈತರಿಗೆ ಸ್ಥಳೀಯವಾಗಿ ಅಗತ್ಯವಿರುವ ಎತ್ತು ಚಾಲಿತ ಹಾಗೂ ಕೈಚಾಲಿತ ಉಪಕರಣಗಳನ್ನು ಕೃಷಿ ಯಾಂತ್ರೀಕರಣ ಯೋಜನೆಯಡಿ ಒದಗಿಸಲಾಗುವುದು
  • ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಹಾಗೂ ಕೃಷಿ ಯಂತ್ರೋಪಕರಣಗಳು ಒಂದೇ ಸೂರಿನಡಿ ದೊರಕಿಸಲು ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ MSIL ವತಿಯಿಂದ ರೈತ ಮಾಲ್‌ಗಳ ಸ್ಥಾಪನೆ
  • ಉತ್ಪಾದನೋತ್ತರ ಕೃಷಿ ಚಟುವಟಿಕೆಗಳ ಬಲವರ್ಧನೆಯ ಮೂಲಕ ರೈತರ ಆದಾಯ ವೃದ್ಧಿಗಾಗಿ ರೂ.100 ಕೋಟಿ ವೆಚ್ಚದಲ್ಲಿ ಮುಂದಿನ 3 ವರ್ಷಗಳಲ್ಲಿ “ಮುಖ್ಯಮಂತ್ರಿ ಕೃಷಿ ವಿಸ್ತಾರ” ಯೋಜನೆಯ ಅನುಷ್ಠಾನ
  • ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಮುಂದಿನ 3 ವರ್ಷಗಳಲ್ಲಿ “ವಸುಧಾಮೃತ” ಕಾರ್ಯಕ್ರಮದ ಜಾರಿ
  • ಬೆಳೆಗಳಿಗೆ ಕೀಟ ಹಾಗೂ ರೋಗಗಳಿಂದ ರಕ್ಷಣೆ, ಜೈವಿಕ ಕೀಟನಾಶಕಗಳ ಬಳಕೆ ಹಾಗೂ ಸುರಕ್ಷಿತ ನಿರ್ವಹಣಾ ಕ್ರಮಗಳ ಮಾಹಿತಿಯನ್ನು ರೈತರಿಗೆ ಸಕಾಲದಲ್ಲಿ ಒದಗಿಸಲು ಮುಂದಿನ 3 ವರ್ಷಗಳಲ್ಲಿ ಸಸ್ಯ ಸಂಜೀವಿನಿ ಯೋಜನೆ ಜಾರಿ

ಇದನ್ನೂ ಓದಿ: RTE Online Application-RTE ಕಾಯ್ದೆ ಸೀಟು ಹಂಚಿಕೆಗೆ ದಿನಾಂಕ ಪ್ರಕಟ: ನಿಮ್ಮ ಮಗುವಿಗೆ ಖಾಸಗಿ ಶಾಲೆ ಪ್ರವೇಶಕ್ಕೆ ಉಚಿತ ಸೀಟ್!

Karnataka Budget 2026

ಸಾರಿಗೆ ಇಲಾಖೆ:

  • ಶಕ್ತಿ ಯೋಜನೆಗಾಗಿ ಪ್ರಸಕ್ತ ಸಾಲಿನಲ್ಲಿ 5,300 ಕೋಟಿ ರೂ. ಮೀಸಲು
  • 1,000 ಹೊಸ ಡೀಸೆಲ್ ಬಸ್ಸುಗಳ ಸೇರ್ಪಡೆ
  • BMTC ಸಂಸ್ಥೆಯ 32 ಹಾಗೂ ಇತರೆ ರಸ್ತೆ ಸಾರಿಗೆ ನಿಗಮಗಳ 62 ಎಲೆಕ್ಟ್ರಿಕ್‌ ಬಸ್ ಡಿಪೋಗಳ ಅಭಿವೃದ್ಧಿ. ನಿಗಮಗಳಿಗೆ 4,000 ವಿದ್ಯುತ್ ಚಾಲಿತ ಬಸ್ಸುಗಳ ಸೇರ್ಪಡೆ
  • ಚಿಕ್ಕಮಗಳೂರು ಹಾಗೂ ತುಮಕೂರಿನಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳ ನಿರ್ಮಾಣ
  • ರಾಮದುರ್ಗ, ಹೊನ್ನಾಳಿ ಮತ್ತು ಗದಗ ನೂತನ ಬಸ್ಸು ನಿಲ್ದಾಣಗಳು ಹಾಗೂ ತರೀಕೆಕೆರೆಯಲ್ಲಿ ಬಸ್ಸು ಡಿಪೋ ನಿರ್ಮಾಣ

ಒಳಾಡಳಿತ ಇಲಾಖೆ:

  • ಪ್ರಸಕ್ತ ಸಾಲಿನಲ್ಲಿ ಗೃಹ ಇಲಾಖೆಯಲ್ಲಿ ಖಾಲಿ ಇರುವ ಒಟ್ಟಾರೆ 8,000 ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ
  • ಗೃಹ ಇಲಾಖೆಯಲ್ಲಿನ ಹುದ್ದೆಗಳ ನೇಮಕಾತಿಯನ್ನು ಕ್ರಮಬದ್ಧವಾಗಿ, ಪಾರದರ್ಶಕವಾಗಿ ಹಾಗೂ ನಿಯಮಿತವಾಗಿ ನಡೆಸಲು ಶಾಶ್ವತ ಪೊಲೀಸ್ ಮತ್ತು ಪೊಲೀಸ್ ಸಹಾಯಕ ಸೇವೆಗಳ ನೇಮಕಾತಿ ಮಂಡಳಿ ಸ್ಥಾಪನೆ
  • ‘ಪೊಲೀಸ್ ಗೃಹ 2025 ಯೋಜನೆ’ಯಡಿ ವಸತಿಗೃಹಗಳ ನಿರ್ಮಾಣಕ್ಕೆ ಪ್ರಸಕ್ತ ಸಾಲಿನಲ್ಲಿ 250 ಕೋಟಿ ರೂ. ವೆಚ್ಚ
  • ಅಗ್ನಿಶಾಮಕ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಪ್ರಸಕ್ತ ನೀಡಲಾಗುತ್ತಿರುವ ಆಹಾರ ಭತ್ಯೆಯನ್ನು 150 ರೂ. ನಿಂದ 300 ರೂ. ಗೆ ಹೆಚ್ಚಳ
  • ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ‘ಮಾದಕ ದ್ರವ್ಯ ವ್ಯಸನ ಮುಕ್ತ ಕೇಂದ್ರ’ ಸ್ಥಾಪನೆ.

ಇದನ್ನೂ ಓದಿ: Diesel Pumpset Subsidy-ಕೃಷಿ ಇಲಾಖೆಯಿಂದ ಡಿಸೇಲ್ ಪಂಪ್ ಪಡೆಯಲು ಅರ್ಜಿ ಆಹ್ವಾನ!

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕಇಲಾಖೆ:

  • ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ವಿಚಾರಧಾರೆಗಳನ್ನು ಯುವಜನರಿಗೆ ತಿಳಿಸಲು ಮತ್ತು ಜಿಲ್ಲಾ ಗಾಂಧಿ ಭವನಗಳನ್ನು ಪುನಃಶ್ಚತನಗೊಳಿಸಲು 'ಮಹಾತ್ಮಾ ಗಾಂಧಿ ಜನ ಶಿಕ್ಷಣ ಕೇಂದ್ರ’ ಯೋಜನೆ ಜಾರಿ
  • ಮಹಾತ್ಮಾ ಗಾಂಧೀಜಿರವರು ಭೇಟಿ ಕೊಟ್ಟ ರಾಜ್ಯದ ವಿವಿಧ ಸ್ಥಳಗಳಲ್ಲಿ ಅವರ ಸ್ಮರಣಾರ್ಥ ಗಾಂಧಿ ಸ್ಮಾರಕ ಸ್ತಂಭ ಗಳ ನಿರ್ಮಾಣ
  • ರಾಜ್ಯದಲ್ಲಿ ಚಲನಚಿತ್ರ ಹಾಗೂ ಇತರೆ ಚಿತ್ರೀಕರಣಗಳಿಗಾಗಿ ಅಗತ್ಯವಿರುವ ವಿವಿಧ ಇಲಾಖೆಗಳ ಅನುಮತಿಗಳನ್ನು ಒಂದೇ ವೇದಿಕೆಯಲ್ಲಿ ಸಿಗುವಂತಾಗಲು 'ಸಿನಿ ಮಿತ್ರ' ಎಂಬ ಆನ್‌ಲೈನ್ ಡಿಜಿಟಲ್ ವ್ಯವಸ್ಥೆ ಜಾರಿ.

ಮುಜರಾಯಿ ಇಲಾಖೆ:

  • ಶ್ರೀ ಮಾತಾ ವೈಷ್ಟೋದೇವಿ ದೇವಾಲಯಕ್ಕೆ ಯಾತ್ರೆ ಕೈಗೊಳ್ಳುವವರಿಗೆ ತಲಾ 5,000 ರೂ. ಸಹಾಯಧನ
  • 259 ಕಲ್ಯಾಣಿಗಳನ್ನು 3 ವರ್ಷಗಳಲ್ಲಿ ಪುನರುಜ್ಜಿವನಗೊಳಿಸಲು ' ಜಲ ನಿಧಿ ಕಲ್ಯಾಣಿಗಳ ಪುನಃಶ್ಚತನ ಯೋಜನೆ' ಜಾರಿ
  • 'ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯ' ಮತ್ತು 'ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ' ಗಳಿಗೆ ಮೂಲಭೂತ ಸೌಲಭ್ಯ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಅಭಿವೃದ್ಧಿ ಪ್ರಾಧಿಕಾರಗಳ ರಚನೆ
  • ಬೆಂಗಳೂರು ನಗರದ ಹೃದಯ ಭಾಗವಾದ ಕೆಂಪೇಗೌಡ ವೃತ್ತದಲ್ಲಿರುವ ಬಂಡಿಶೇಷಮ್ಮ ಛತ್ರದ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಕಲ್ಪಿಸಲು ವಿದ್ಯಾರ್ಥಿ ನಿಲಯ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಾಣ.

ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ:

  • ಅರಣ್ಯ ಇಲಾಖೆಯಲ್ಲಿನ ವಿವಿಧ ವೃಂದಗಳಲ್ಲಿನ 2,000 ಹುದ್ದೆಗಳ ಭರ್ತಿ
  • 'ಕರ್ನಾಟಕ ಮಾನವ-ವನ್ಯಪ್ರಾಣಿ ಸಂಘರ್ಷ ನಿವಾರಣಾ ಕಾರ್ಯತಂತ್ರ ಯೋಜನೆ' ಅನುಷ್ಠಾನಗೊಳಿಸಲು ಮುಂದಿನ ಐದು ವರ್ಷದಲ್ಲಿ 1,500 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕ್ರಮ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 269 ಕೋಟಿ ರೂ. ಮೀಸಲು
  • ಬೆಂಗಳೂರು ಉತ್ತರ ತಾಲ್ಲೂಕಿನ ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ 'ಸಾಂಸ್ಕೃತಿಕ ನಾಯಕ ಬಸವಣ್ಣ ಜೈವಿಕ ವೈವಿಧ್ಯ ಉದ್ಯಾನ' ನಿರ್ಮಾಣ
  • ವೃಕ್ಷಮಾತೆ ' ಸಾಲುಮರದ ತಿಮ್ಮಕ್ಕ' ಸ್ಮರಣಾರ್ಥ ಹುಲಿಕಲ್-ಕುದೂರು ಹತ್ತಿರ ಸ್ಮಾರಕ ನಿರ್ಮಾಣ

ಕಂದಾಯ ಇಲಾಖೆ:

  • *'ಕರ್ನಾಟಕ ಲ್ಯಾಂಡ್ ಸ್ಟಾಕ್ ಯೋಜನೆ'ಯಡಿ ಭೂಮಿ, ಮೋಜಿಣಿ, ಕಾವೇರಿ, ಇ-ಸ್ವತ್ತು, ಇ-ಆಸ್ತಿಯಲ್ಲಿರುವ ಜಮೀನು/ಆಸ್ತಿಯ ದತ್ತಾಂಶಗಳನ್ನು GIS-ಆಧಾರಿತ ಡಿಜಿಟಲ್ ವೇದಿಕೆಯಲ್ಲಿ ಸಮಗ್ರವಾಗಿ ಕ್ರೋಢೀಕರಿಸಿ ಏಕರೂಪದಲ್ಲಿ ದಾಖಲೆಗಳ ನಿರ್ವಹಣೆ
  • 10ಕ್ಕೂ ಹೆಚ್ಚು ಇಲಾಖೆಗಳೊಂದಿಗೆ ಸಂಪರ್ಕ ಹೊಂದಿರುವ ‘ಭೂಮಿ-8.0’ ತಂತ್ರಾಂಶದ ಅಭಿವೃದ್ಧಿಗೆ ಸುಮಾರು 50 ಕೋಟಿ ರೂ. ವೆಚ್ಚ
  • ಭೂಮಾಪನ ಇಲಾಖೆಯಲ್ಲಿ ಮೂಲ ದಾಖಲೆಗಳು 160 ವರ್ಷಕ್ಕೂ ಹೆಚ್ಚು ಹಳೆಯದಾಗಿದ್ದು, ಇವುಗಳನ್ನು ಸಂರಕ್ಷಣೆ ಮಾಡಬೇಕಾಗಿರುವುದರಿಂದ ರಾಜ್ಯದ ಎಲ್ಲಾ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಗಳಲ್ಲಿ ನವೀಕೃತ ಅಭಿಲೇಖಾಲಯಗಳನ್ನು 72 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆ
  • ತಂತ್ರಾಂಶದಲ್ಲಿನ ತೊಡಕುಗಳನ್ನು ನಿವಾರಿಸಿ ನೋಂದಣಿ ವ್ಯವಸ್ಥೆಯನ್ನು ಇನ್ನಷ್ಟು ಸುಗಮಗೊಳಿಸಲು 65 ಕೋಟಿ ರೂ. ವೆಚ್ಚದಲ್ಲಿ ಕಾವೇರಿ 3.0 ವ್ಯವಸ್ಥೆ ಅಭಿವೃದ್ಧಿ
  • ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಹಾಗೂ ಬಳ್ಳಾರಿ ಜಿಲ್ಲೆಯ ಸಿರಗುಪ್ಪದಲ್ಲಿ ‘ಪ್ರಜಾಸೌಧ’ ಕಟ್ಟಡಗಳ ನಿರ್ಮಾಣ

ಪ್ರವಾಸೋದ್ಯಮ ಇಲಾಖೆ:

  • ಕರ್ನಾಟಕದ ಕರಾವಳಿ ಜಿಲ್ಲೆಗಳ ವಿಶೇಷ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲು 'ಸಮಗ್ರ ಕರಾವಳಿ ಅಭಿವೃದ್ಧಿ ಯೋಜನೆ’ ಜಾರಿ
  • ಪ್ರವಾಸ ಮಾರ್ಗದರ್ಶಕರಿಗೆ ಆಯ್ದ ವಿಶ್ವವಿದ್ಯಾಲಯಗಳಲ್ಲಿ ಕೌಶಲ್ಯ ತರಬೇತಿ ನೀಡಲು ಡಿಪ್ಲೋಮಾ ಪ್ರಾರಂಭ
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಮುಳ್ಳಯ್ಯನಗಿರಿ - ಸೀತಾಳಯ್ಯನಗಿರಿಯಿಂದ ಕೈಮರದವರೆಗೆ ರೋಪ್-ವೇ ನಿರ್ಮಾಣ
  • ರಾಜ್ಯದ ಸಂರಕ್ಷಿತ 844 ಸ್ಮಾರಕಗಳ ಹಾಗೂ 1,000 ಅಸುರಕ್ಷಿತ ಸ್ಮಾರಕಗಳ ರಕ್ಷಣೆ ಮಾಡುವ ಹಿತದೃಷ್ಟಿಯಿಂದ 1,000 ಸ್ಮಾರಕ ಮಿತ್ರರನ್ನು ಗುರುತಿಸಿ ತರಬೇತಿ. ಇವರುಗಳನ್ನು ಇಲಾಖೆಯ ಮಾನ್ಯತಾ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಕ್ರಮ

ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ:

  • ಬೆಂಗಳೂರಿನ ಹೆಸರಘಟ್ಟ ಕೆರೆಯಲ್ಲಿ ಪಿಪಿಪಿ ಮಾದರಿಯಲ್ಲಿ Kayaking, Canoeing Centre of Excellence ಸ್ಥಾಪನೆ
  • ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು ಮೈಸೂರಿನಲ್ಲಿರುವ ದಟ್ಟಗಳ್ಳಿಯಲ್ಲಿ ಗುರುತಿಸಲಾದ ಜಾಗದಲ್ಲಿ ಆಧುನಿಕ ಸೈಕ್ಲಿಂಗ್ ವೆಲೋಡೋಮ್ ನಿರ್ಮಾಣ
  • ಬಂಗಾರಪೇಟೆ, ಮುದ್ದೇಬಿಹಾಳ, ಗುಳೇದಗುಡ್ಡ, ಕನಕಪುರ, ಕುಕನೂರು ಮತ್ತು ಮಸ್ಕಿಯಲ್ಲಿ ತಲಾ ಎರಡು ಕೋಟಿ ರೂ. ವೆಚ್ಚದಲ್ಲಿ ತಾಲ್ಲೂಕು ಕ್ರೀಡಾಂಗಣಗಳ ನಿರ್ಮಾಣ
  • ಕಲ್ಯಾಣ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಉತ್ತಮ ಕ್ರೀಡಾ ವಿಜ್ಞಾನ ಸೇವೆಗಳನ್ನು ಒದಗಿಸಲು ಕಲಬುರಗಿಯಲ್ಲಿ ಆಧುನಿಕ ಕ್ರೀಡಾ ವಿಜ್ಞಾನ ಕೇಂದ್ರ ಆರಂಭ
  • ಬೆಳಗಾವಿಯ ಬೆಳಗುಂದಿಯಲ್ಲಿ ನೂತನ ಕುಸ್ತಿ ಅಖಾಡ ನಿರ್ಮಾಣ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ:

  • ಭಾವೈಕ್ಯತೆಯ ಹರಿಕಾರ ಸಂತ ಶಿಶುನಾಳ ಶರೀಫ ಹಾಗೂ ವೀರರಾಣಿ ಬೆಳವಡಿ ಮಲ್ಲಮ್ಮ ಇವರುಗಳ ಹೆಸರಿನಲ್ಲಿ ಪ್ರತ್ಯೇಕ ಪ್ರತಿಷ್ಠಾನ ಸ್ಥಾಪನೆ
  • ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು. ಆರ್. ಅನಂತಮೂರ್ತಿಯವರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಒಂದು ಅಧ್ಯಯನ ಪೀಠ ಸ್ಥಾಪನೆ
  • ದಲಿತ ಕವಿ ಸಿದ್ದಲಿಂಗಯ್ಯ ಮತ್ತು ಡಾ. ಡಿ. ಆರ್. ನಾಗರಾಜ ಅವರ ಹೆಸರಿನಲ್ಲಿ ಟ್ರಸ್ಟ್ ರಚಿಸಲು ಕ್ರಮ
  • ಕರ್ನಾಟಕ ರಾಜ್ಯದ ಸಂಸ್ಕೃತಿಯ ಅಂಗವಾಗಿರುವ ಹವ್ಯಕ ಭಾಷೆಯ ಬೆಳವಣಿಗೆಗೆ ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ
  • ರಾಷ್ಟ್ರಕವಿ ಕುವೆಂಪುರವರ ಮಲೆಗಳಲ್ಲಿ ಮದುಮಗಳು ರಂಗರೂಪಕದಂತೆ ಖ್ವಾಜಾ ಬಂದೇ ನವಾಜ್ ರವರ ಕುರಿತು ಅಹೋರಾತ್ರಿ ನಾಟಕ ಏರ್ಪಾಡು.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ:

  • IISc ಅಧೀನದಲ್ಲಿರುವ ಪ್ರತಿಷ್ಠಾನವಾದ AI ಮತ್ತು ರೋಬೋಟಿಕ್ಸ್ ತಂತ್ರಜ್ಞಾನ ಪಾರ್ಕ್ (ART-PARK) ಸ್ಥಾಪನೆ
  • ISRO ಮತ್ತು ಕಿಯೋನಿಕ್ಸ್ ಸಹಯೋಗದಲ್ಲಿ 'ಬೆಂಗಳೂರು ರೋಬೋಟಿಕ್ಸ್ ಮತ್ತು AI ಇನ್ನೊವೇಶನ್ ಝೋನ್' (BRAINz) ಎಂಬ ರೋಬೋಟಿಕ್ಸ್ ಮತ್ತು AI ಕ್ಯಾಂಪಸ್ ಸ್ಥಾಪನೆ
  • IIIT ರಾಯಚೂರಿನಲ್ಲಿ AI ಶ್ರೇಷ್ಠತಾ ಕೇಂದ್ರ ಸ್ಥಾಪನೆ.
  • ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ 'ವಿಜ್ಞಾನ ನಗರ' ಕ್ಕೆ ಕೇಂದ್ರದ ಅನುಮೋದನೆ ದೊರೆತ ನಂತರ ವಾಸ್ತುವಿನ್ಯಾಸ ತಯಾರಿಸಲು ಕ್ರಮ
  • ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಕೊಪ್ಪಳ ಹಾಗೂ ಬೀದರ್ ಜಿಲ್ಲೆಗಳಲ್ಲಿ 24 ಕೋಟಿ ರೂ. ವೆಚ್ಚದಲ್ಲಿ 6 ಹೊಸ ತಾರಾಲಯಗಳ ಸ್ಥಾಪನೆ.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ:

  • ಸಹಕಾರಿ ನೂಲಿನ ಗಿರಣಿಗಳನ್ನು ಪ್ರೋತ್ಸಾಹಿಸಲು ಪ್ರತಿ ಯೂನಿಟ್ ಗೆ 3 ರೂ. ವಿದ್ಯುತ್ ಸಹಾಯಧನ
  • ಕೇಂದ್ರ ಸರ್ಕಾರ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 3,550 ರೂ. ಎಫ್.ಆರ್.ಪಿ ನಿಗದಿ ಪಡಿಸಿದ್ದು, ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಹೆಚ್ಚುವರಿಯಾಗಿ 50 ರೂ. ಪಾವತಿಸಲು 300 ಕೋಟಿ ರೂ. ಒದಗಿಸಿದೆ
  • MSMEಗಳನ್ನು ಪ್ರೋತ್ಸಾಹಿಸಲು KSSIDC ಮೂಲಕ ವಿಜಯಪುರದ ಮುದ್ದೇಬಿಹಾಳ ಹಾಗೂ ಬಳ್ಳಾರಿಯ ಕಂಪ್ಲಿಯಲ್ಲಿ 2 ಹೊಸ ಕೈಗಾರಿಕಾ ವಸಾಹತುಗಳ ಪ್ರಾರಂಭ. ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 10 ಕೈಗಾರಿಕಾ ವಸಾಹತುಗಳಲ್ಲಿ 1,500 ನಿವೇಶನಗಳ ಹಂಚಿಕೆ
  • ಮಂಡ್ಯದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ನಿರ್ಮಾಣ ಮತ್ತು ಮೂಲಸೌಕರ್ಯ ಸಲಕರಣೆಗಳ ಪರೀಕ್ಷಾ ಘಟಕ' ವನ್ನು ಸ್ಥಾಪಿಸಲು ರಾಜ್ಯ ಸರ್ಕಾರದ ವತಿಯಿಂದ 100 ಎಕರೆ ಜಮೀನು.

ಕೈಮಗ್ಗ ಮತ್ತು ಜವಳಿ:

  • ರಾಜ್ಯದ ನೇಕಾರರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಮತ್ತು ಅವರ ಜೀವನ ಮಟ್ಟ ಸುಧಾರಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ.
  • ನೇಕಾರರ ಸಮ್ಮಾನ್ ಯೋಜನೆಯಡಿ ಒಟ್ಟು 1.30 ಲಕ್ಷ ನೇಕಾರರಿಗೆ ವಾರ್ಷಿಕ 5,000 ರೂ. ಆರ್ಥಿಕ ನೆರವು.
  • ವಿದ್ಯುತ್ ಸಹಾಯಧನ ಯೋಜನೆಯಡಿ 1 ರಿಂದ 10 ಎಚ್.ಪಿ. ವರೆಗಿನ ಉಚಿತವಾಗಿ ಮತ್ತು 10 ರಿಂದ 20 ಎಚ್.ಪಿ. ವರೆಗಿನ ಘಟಕಗಳಿಗೆ ರಿಯಾಯಿತಿ ದರದಲ್ಲಿ ವಿದ್ಯುತ್
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ 20 ಎಚ್.ಪಿ.ಯಿಂದ 200 ಎಚ್.ಪಿ. ವರೆಗಿನ ವಿದ್ಯುತ್ ಮಗ್ಗ ನೇಕಾರರಿಗೆ ಪ್ರತಿ ಯೂನಿಟ್ ಗೆ ಶೇ. 50ರಷ್ಟು ಸಹಾಯಧನ
  • ನೇಕಾರರ ಏಳಿಗೆಗಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆಯಾಗಿ 225 ಕೋಟಿ ರೂ. ಅನುದಾನ.

ಮೌಲಸೌಕರ್ಯ ಅಭಿವೃದ್ದಿ ಬಂದರು ಮತ್ತು ಒಳನಾಡು ಜಲಸಾರಿಗೆ:

  • ರಾಜ್ಯದಲ್ಲಿನ ಏಳು ದೇಶೀಯ ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ಪ್ರಸಕ್ತ ಸಾಲಿಗೆ 200 ಕೋಟಿ ರೂ. ಅನುದಾನ ನಿಗದಿ
  • ವಿಜಯಪುರ ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಗಳ ಆವರಣದಲ್ಲಿ ಕ್ರಮವಾಗಿ ಫ್ಲೈಟ್ ಟ್ರೈನಿಂಗ್ ಸ್ಕೂಲ್ ಹಾಗೂ ಮ್ಯಾನುಫ್ಯಾಕ್ಚರಿಂಗ್ / ಅಸೆಂಬ್ಲಿ ಆಫ್ ಏರ್ ಕ್ರಾಫ್ಟ್ ಚಟುವಟಿಕೆಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಕ್ರಮ
  • ಬೆಂಗಳೂರು ಉಪನಗರ ರೈಲು ಯೋಜನೆಯ ನಾಲ್ಕು ಕಾರಿಡಾರ್ ಗಳ ಪೈಕಿ ಬೆನ್ನಿಗಾನಹಳ್ಳಿ-ಚಿಕ್ಕಬಾಣಾವರ ಕಾರಿಡಾರ್ ಗೆ ಅಗತ್ಯವಿರುವ ಶೇ 100ರಷ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಹೀಲಲಿಗೆ-ರಾಜಾನುಕುಂಟೆ ಕಾರಿಡಾರ್ ಗೆ ಅಗತ್ಯವಿರುವ ಭೂಮಿಯ ಭೂಸ್ವಾಧೀನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಡಿಸೆಂಬರ್ 2030ರ ಅಂತ್ಯಕ್ಕೆ ಎರಡು ಕಾರಿಡಾರ್ ಪೂರ್ಣಗೊಳಿಸುವ ಗುರಿ. ಪ್ರಸಕ್ತ ಸಾಲಿನಲ್ಲಿ ಈ ಕಾಮಗಾರಿಗಳಿಗೆ 500 ಕೋಟಿ ರೂ. ಅನುದಾನ.

ಲೋಕೋಪಯೋಗಿ ಇಲಾಖೆ:

  • ಸೇತುವೆಗಳ ನಿರ್ಮಾಣ, ಸೇತುವೆಗಳ ದುರಸ್ತಿ ಹಾಗೂ ಕಾಲುಸಂಕಗಳ ನಿರ್ಮಾಣಕ್ಕಾಗಿ ಮುಂದಿನ 2 ವರ್ಷಗಳಲ್ಲಿ 2,000 ಕೋಟಿ ರೂ. ಮೊತ್ತ ಮೀಸಲು
  • ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ -5 ಘಟ್ಟ -II ರಡಿ *1,846 ಕಿ.ಮೀ. ಉದ್ದದ ರಸ್ತೆಯನ್ನು 5,000 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿ
  • ವಿವಿಧ ಮುಂದುವರೆದ ಯೋಜನೆಗಳಡಿ 2,200 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಗಳನ್ನು ಹಾಗೂ 3,500 ಕಿ.ಮೀ. ಉದ್ದದ ಜಿಲ್ಲಾ ರಸ್ತೆಗಳನ್ನು 5,776 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
  • 5,736 ಕೋಟಿ ರೂ.ಯೋಜನಾ ವೆಚ್ಚದಲ್ಲಿ ರಾಜ್ಯದಾದ್ಯಂತ ಸುಮಾರು 875 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗಳ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಅನುಮೋದನೆ ಪಡೆದು ಟೆಂಡರ್ ಆಹ್ವಾನಿಸಲು ಕ್ರಮ.

ಇಂಧನ ಇಲಾಖೆ:

  • ಗೃಹಜ್ಯೋತಿ ಯೋಜನೆಗೆ ಪ್ರಸಕ್ತ ವರ್ಷದಲ್ಲಿ ರೂ.10,578 ಕೋಟಿ ಮೀಸಲು
  • ನೀರಾವರಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಸಹಾಯಧನ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ರೂ.19,290 ಕೋಟಿ ಮೀಸಲು
  • ‘ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’ ಎಂಬ ಹೊಸ ಯೋಜನೆ ಜಾರಿ. ಅಂದಾಜು 10,500 ಕೋಟಿ ರೂ. ವೆಚ್ಚದಲ್ಲಿ 3,000 MW ಕ್ಷಮತೆಯ ಸೌರ ವಿದ್ಯುತ್ ಸ್ಥಾವರಗಳ ಪ್ರಾರಂಭ
  • ಅಂದಾಜು 3,400 ಕೋಟಿ ರೂ.ವೆಚ್ಚದಲ್ಲಿ ಹುಲಿಯೂರು, ಪಾವಗಡ ಮತ್ತು ಕುಷ್ಟಗಿಯ ಸಬ್ ಸ್ಟೇಷನ್ ಗಳಲ್ಲಿ 2,000 MWh ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆ (BESS) ಅಳವಡಿಕೆ ಯೋಜನೆ ಆರಂಭ
  • ಸಾರ್ವಜನಿಕ ಸ್ಥಳಗಳಲ್ಲಿ ಅಂದಾಜು 777 ಕೋಟಿ ರೂ. ವೆಚ್ಚದಲ್ಲಿ 1,250 ವಾಹನ ಚಾರ್ಚಿಂಗ್ ಕೇಂದ್ರಗಳನ್ನು ಪಿ.ಎಮ್-ಇ ಡ್ರೈವ್ ಯೋಜನೆಯಡಿ ಸ್ಥಾಪನೆ.

ನಗರಾಭಿವೃದ್ಧಿ ಇಲಾಖೆ:

  • ಬೆಂಗಳೂರಿನ ಐದು ನಗರ ಪಾಲಿಕೆಗಳಲ್ಲಿ 1,255 ಕೋಟಿ ರೂ. ಮೊತ್ತದ ವಾರ್ಡ್ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ
  • 1,700 ಕೋಟಿ ರೂ.ಗಳ ಮೊತ್ತದಲ್ಲಿ ಒಟ್ಟು 157.39 ಕಿ.ಮೀ. ಉದ್ದದ ರಸ್ತೆಗಳ ವೈಟ್ ಟಾಪಿಂಗ್
  • *1,936 ಕೋಟಿ ರೂ.ಗಳ ಮೊತ್ತದಲ್ಲಿ ಮುಖ್ಯ ಮತ್ತು ಉಪಮುಖ್ಯ (ಆರ್ಟೇರಿಯಲ್ ಮತ್ತು ಸಬ್‌ ಆರ್ಟೇರಿಯಲ್) ರಸ್ತೆಗಳ ಅಭಿವೃದ್ಧಿ
  • 450 ಕೋಟಿ ರೂ. ವೆಚ್ಚದಲ್ಲಿ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗೂ “ಹೊರ ವರ್ತುಲ ರಸ್ತೆ”ಯ ಅಭಿವೃದ್ಧಿ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ:

  • ಕೊಪ್ಪಳ ಜಿಲ್ಲೆಯ ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕಿನ ಬನ್ನಿಕೊಪ್ಪ ಹಾಗೂ 23 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆ 125 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನ
  • ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಚಿರಸ್ಥಾಯಿಗೊಳಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು 'ಮಹಾತ್ಮಾ ಗಾಂಧಿ ಗ್ರಾಮ ಪಂಚಾಯಿತಿ' ಎಂದು ನಾಮಕರಣ
  • ರಾಜ್ಯದ ಎಲ್ಲಾ ಪಂಚಾಯಿತಿಗಳಲ್ಲಿ ಸೋಲಾರ್ ಮೈಕ್ರೋ ಗ್ರಿಡ್ ಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವ 'ಅನಂತ' ಯೋಜನೆ ಅನುಷ್ಠಾನ
  • ಜಲ ಜೀವನ್ ಮಿಷನ್ ಯೋಜನೆಗೆ ಕೇಂದ್ರದ ಅನುದಾನದ ಕೊರತೆಯ ನಡುವೆ ರಾಜ್ಯ ಸರ್ಕಾರದಿಂದ ಪ್ರಸ್ತುತ ಈ ಯೋಜನೆಗಾಗಿ 10,433 ಕೋಟಿ ರೂ. ಮೀಸಲು.
  • ಗ್ರಾಮ ಪಂಚಾಯಿತಿಗಳನ್ನು ಸಬಲಗೊಳಿಸಿ ಗ್ರಾಮೀಣ ಜೀವನೋಪಾಯ ಬಲಪಡಿಸಿದ್ದ ಮನರೇಗಾ ಪುನಃಸ್ಥಾಪಿಸುವಂತೆ ತೀವ್ರ ಆಗ್ರಹ. ಗ್ರಾಮೀಣ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಹಾಗೂ ವಿಕೇಂದ್ರೀಕೃತ ಆಡಳಿತದ ತತ್ವಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲಾ ಕ್ರಮ, ಅಗತ್ಯವಿದ್ದಲ್ಲಿ ಕಾನೂನು ಹೋರಾಟ
  • 'ಪ್ರಗತಿ ಪಥ ' ಯೋಜನೆಯಡಿ 783 ರಸ್ತೆಗಳ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, 655 ರಸ್ತೆಗಳ ಡಿ.ಪಿ.ಆರ್.ಗಳನ್ನು ತಯಾರಿಸಲಾಗಿದೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 500 ಕೋಟಿ ರೂ. ಮೀಸಲು.

ಕೌಶಲ್ಯಾಭಿವೃದ್ಧಿ ಇಲಾಖೆ:

  • ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು, ಕೆಜಿಟಿಟಿಐಗಳು, ಕೆಎಸ್‌ಡಿಎ ಮತ್ತು ಜೆಟಿಎಸ್‌ಗಳ ಮೂಲಭೂತ ಸೌಕರ್ಯ ಮತ್ತು ತರಬೇತಿ ಗುಣಮಟ್ಟವನ್ನು ಹೆಚ್ಚಿಸಲು ಒಟ್ಟು ರೂ.1,386 ಕೋಟಿ ವೆಚ್ಚದಲ್ಲಿ "K-QUEST" (ಕರ್ನಾಟಕ – ಕ್ವಾಲಿಟಿ ಅಪ್‌ಗ್ರಡೆಷನ್‌ ಫಾರ್‌ ಎಂಪ್ಲಾಯ್ಮೆಂಟ್‌ ಎಂಡ್‌ ಸ್ಕಿಲ್‌ ಟ್ರಾನ್ಸ್‌ಫಾರ್ಮೇಷನ್) ಯೋಜನೆಯ ಜಾರಿ
  • ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡಿರುವ PM- SETU ಯೋಜನೆ ಅಡಿಯಲ್ಲಿ ಕೇಂದ್ರ, ರಾಜ್ಯ ಮತ್ತು ಉದ್ದಿಮೆಗಳ ಸಹಭಾಗಿತ್ವದಲ್ಲಿ ಹಬ್‌ ಎಂಡ್‌ ಸ್ಪೋಕ್ ಮಾದರಿಯಲ್ಲಿ ಕ್ಲಸ್ಟರ್‌ಗಳನ್ನಾಗಿ ಉನ್ನತೀಕರಿಸಲಾಗುವುದು. ಈ ಸಾಲಿನಲ್ಲಿ ಎರಡು ಕ್ಲಸ್ಟರ್ ಗಳನ್ನು 241 ಕೋಟಿ ರೂ. ಘಟಕ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು
  • ಮೈಸೂರು ಮತ್ತು ಕಲಬುರಗಿಯಲ್ಲಿ ತಲಾ 16 ಕೋಟಿ ರೂ.ವೆಚ್ಚದಲ್ಲಿ ಷ್ನೈಡರ್‌ ಎಲೆಕ್ಟ್ರಿಕ್‌ (Schneider Electric) ಯೂತ್ ಇಂಪ್ಯಾಕ್ಟ್ ಕೇಂದ್ರವನ್ನು ಸ್ಥಾಪಿಸಲಾಗುತ್ತಿದ್ದು, ಇದರಿಂದ ಪ್ರತಿ ವರ್ಷ ಒಟ್ಟಾರೆ 2,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮತ್ತು ಉದ್ಯೋಗವಕಾಶ ಕಲ್ಪಿಸಲು ಅನುಕೂಲ.

ಕಾರ್ಮಿಕ ಇಲಾಖೆ:

  • ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಲು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ರೂ.600 ಕೋಟಿ ವೆಚ್ಚದಲ್ಲಿ 10 ಜಿಟಿಟಿಸಿ ಕೇಂದ್ರಗಳ ಸ್ಥಾಪನೆ
  • 6 ರಿಂದ 12ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರ ಮಕ್ಕಳಿಗಾಗಿ ಪ್ರಸಕ್ತ ಸಾಲಿನಲ್ಲಿ 62 ನೂತನ ಶ್ರಮಿಕ ವಸತಿ ಶಾಲೆಗಳ ಆರಂಭ
  • ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ವೃತ್ತಿ ಬುನಾದಿ ಹಾಗೂ ಉನ್ನತಿ ಕೌಶಲ್ಯ ತರಬೇತಿಯನ್ನು ನೀಡಲು ರೂ.200 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಅತ್ಯಾಧುನಿಕ ಮೂಲಸೌಕರ್ಯವನ್ನು ಒಳಗೊಂಡ ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ
  • ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಕೌಶಲ್ಯಾಧಾರಿತ ಉದ್ಯೋಗ ದೊರಕಿಸಿಕೊಡುವ ಉದ್ದೇಶದಿಂದ ಆನ್‌ಲೈನ್ ಉದ್ಯೋಗ ವಿನಿಮಯ ಕೇಂದ್ರವನ್ನು ಸ್ಥಾಪಿಸಲು ರೂ.5 ಕೋಟಿ ವೆಚ್ಚದಲ್ಲಿ 'ಕಾಯಕ ಭಾಗ್ಯ' ಯೋಜನೆ ಜಾರಿಗೆ.

ಆಹಾರ ಇಲಾಖೆ:

  • ಆಹಾರ ಧಾನ್ಯಗಳ ವಿತರಣೆಗಾಗಿ ನೀಡಲಾಗುವ ಚಿಲ್ಲರೆ ಹಾಗೂ ಸಗಟು ಲಾಭಾಂಶದ ಪಾವತಿಯಲ್ಲಿ ವಿಳಂಬವನ್ನು ನಿವಾರಿಸಲು FIST Application ಮೂಲಕ ಲಾಭಾಂಶದ ನೇರ ಪಾವತಿ
  • ಪ್ರಸ್ತುತ ಜಾರಿಯಲ್ಲಿರುವ ಇಲಾಖೆಯ ಸಹಾಯವಾಣಿ (1967) ವ್ಯವಸ್ಥೆಯನ್ನು ಸ್ವಯಂ ಚಾಲಿತ ದೂರು ಕೇಂದ್ರ, ಧ್ವನಿ ಚಾಟ್‌ಬಾಟ್ ಮತ್ತು ಲೈವ್ ಕರೆ ವರ್ಗಾವಣೆ ವ್ಯವಸ್ಥೆಗಳನ್ನು ಒಳಗೊಂಡ AI ಆಧಾರಿತ “ಸ್ಮಾರ್ಟ್‌ ಅನ್ನವಾಣಿ”ಯಾಗಿ ಪರಿವರ್ತನೆ
  • ದಾಸೋಹ ಯೋಜನೆಯಡಿ 34 ಹೊಸ ಕಲ್ಯಾಣ ಸಂಸ್ಥೆಗಳಲ್ಲಿ ಇರುವ 6,701 ಫಲಾನುಭವಿಗಳಿಗೆ ಆಹಾರ ಭದ್ರತೆ ಒದಗಿಸಲು ಕ್ರಮ.

ವಸತಿ ಇಲಾಖೆ:

  • ಪ್ರಸಕ್ತ ಸಾಲಿನಲ್ಲಿ 3 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದ್ದು, ಹಿಂದಿನ ಸರ್ಕಾರವು ಅನುದಾನ ನೀಡದೇ ಮಂಜೂರಾತಿ ನೀಡಿರುವ 4.90 ಲಕ್ಷ ಮನೆಗಳನ್ನು ಪೂರ್ಣಗೊಳಿಸಲು ಕ್ರಮ
  • 'ಕೆ.ಹೆಚ್.ಬಿ ಸೂರ್ಯ ಕ್ರೀಡಾ ಗ್ರಾಮ' ಎಂಬ ಹೆಸರಿನಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ 80,000 ಆಸನ ಸಾಮರ್ಥ್ಯವುಳ್ಳ ಕ್ರಿಕೆಟ್ ಕ್ರೀಡಾಂಗಣ ಹಾಗೂ ಕ್ರೀಡಾಕೂಟಗಳನ್ನು ನಡೆಸಲು ಅನುಕೂಲವಾಗುವಂತೆ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗುವುದು.
  • ಕೆ.ಹೆಚ್.ಬಿ. ವತಿಯಿಂದ ನಮ್ಮ ಮನೆ ಯೋಜನೆಯಡಿಯಲ್ಲಿ ಮುಂದಿನ ಎರಡು ವರ್ಷಗಳಲ್ಲಿ 50 ಸಾವಿರ ನಿವೇಶನಗಳು ರಿಯಾಯತಿ ದರದಲ್ಲಿ ವಿತರಣೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ:

  • 150 ಸಂಖ್ಯಾಬಲದ 25 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಆರಂಭ ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ 25 ವಿದ್ಯಾರ್ಥಿನಿಲಯಗಳಲ್ಲಿ 50 ವಿದ್ಯಾರ್ಥಿಗಳ ಸಂಖ್ಯಾಬಲವನ್ನು ಹೆಚ್ಚಿಸಲಾಗುವುದು
  • ಸಂತ ಶಿಶುನಾಳ ಶರೀಫರವರ ಹೆಸರಿನಲ್ಲಿ 10 ಹೊಸ ವಸತಿ ಶಾಲೆಗಳನ್ನು CBSE ಪಠ್ಯಕ್ರಮದಡಿಯಲ್ಲಿ ಪ್ರಾರಂಭಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ರೂ.10 ಕೋಟಿ ಅನುದಾನ
  • 100 ಮೌಲಾನಾ ಆಜಾದ್ ಮಾದರಿ ಶಾಲೆಗಳು ಹಾಗೂ ಉರ್ದು ಶಾಲೆಗಳನ್ನು ರೂ.400 ಕೋಟಿ ವೆಚ್ಚದಲ್ಲಿ ಕೆ.ಪಿ.ಎಸ್‌. ಮಾದರಿ ಶಾಲೆಗಳಾಗಿ ಉನ್ನತೀಕರಣ
  • ಜೈನ, ಬೌದ್ಧ ಮತ್ತು ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಹಾಗೂ ಬೌದ್ಧ ಧರ್ಮದ ಧಮ್ಮಾಚಾರಿಗಳಿಗೆ ರೂ.6,000 ಮಾಸಿಕ ಗೌರವಧನ ಸೌಲಭ್ಯ ನೀಡಲು ಕ್ರಮ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:

  • ಬೆಂಗಳೂರು, ಮೈಸೂರು, ಮಂಗಳೂರು, ಧಾರವಾಡ, ಬೆಳಗಾವಿ, ಕಲಬುರಗಿ, ದಾವಣಗೆರೆ, ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ 150 ಸಂಖ್ಯಾಬಲದ 50 ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಸ್ಥಾಪನೆ
  • ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಿಗೆ 5 ಕೋಟಿ ರೂ. ಘಟಕ ವೆಚ್ಚದಲ್ಲಿ 50 ಸ್ವಂತ ಕಟ್ಟಡಗಳ ನಿರ್ಮಾಣ
  • ಸವಿತಾ ಸಮಾಜದವರು ಸಲೂನ್‌ಗಳನ್ನು ತೆರೆಯಲು ಶೇ.4 ರಷ್ಟು ಬಡ್ಡಿದರದಲ್ಲಿ ರೂ.10 ಲಕ್ಷದ ವರೆಗೆ ಸಾಲ ಮತ್ತು ಸಹಾಯಧನ ಸೌಲಭ್ಯ
  • ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಹಾಗೂ ದುರಸ್ತಿ ಕಾಮಗಾರಿಗಳಿಗೆ ರೂ.50 ಕೋಟಿ ಅನುದಾನ

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ:

  • 150 ಸಂಖ್ಯಾಬಲದ 50 ಮೆಟ್ರಿಕ್ ನಂತರದ ಹೊಸ ವಿದ್ಯಾರ್ಥಿ ನಿಲಯಗಳ ಆರಂಭ
  • ಪರಿಶಿಷ್ಟ ಪಂಗಡಗಳ ನಿರುದ್ಯೋಗಿ ಯುವಕ/ಯುವತಿಯರಿಗೆ ಫಾಸ್ಟ್ ಫುಡ್ ಟ್ರಕ್ ಟ್ರೈಲರ್ / ಮೊಬೈಲ್ ಕಿಚನ್ ಫುಡ್ ಕಿಯೋಸ್ಕ್‌ (Kiosk) ಆರಂಭಿಸಲು ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಠ ನಾಲ್ಕು ಲಕ್ಷ ರೂ.ಗಳ ಸಹಾಯಧನ
  • ಪರಿಶಿಷ್ಟ ಪಂಗಡದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ಆಶ್ರಮ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಆರೈಕೆಗಾಗಿ 119 ಮಹಿಳಾ ಕೇರ್‌ಟೇಕ‌ರ್ ಹುದ್ದೆಗಳಿಗೆ ಮಂಜೂರಾತಿ
  • ಪರಿಶಿಷ್ಟ ಪಂಗಡದ ಸಮುದಾಯದವರ ಹಕ್ಕುಗಳನ್ನು ಸಂರಕ್ಷಿಸಲು ಪ್ರತ್ಯೇಕ ಪರಿಶಿಷ್ಟ ಪಂಗಡಗಳ ಆಯೋಗ ಸ್ಥಾಪನೆ
  • ಪರಿಶಿಷ್ಟ ಜಾತಿಯ 20, ಪರಿಶಿಷ್ಟ ಪಂಗಡದ 5 ಮತ್ತು ಹಿಂದುಳಿದ ವರ್ಗಗಳ 5 ವಸತಿ ಶಾಲೆಗಳು ಸೇರಿದಂತೆ ಒಟ್ಟು 30 ಕ್ರೈಸ್ ವಸತಿ ಶಾಲೆಗಳಿಗೆ ರೂ.660 ಕೋಟಿ ವೆಚ್ಚದಲ್ಲಿ ಸ್ವಂತ ಕಟ್ಟಡಗಳ ನಿರ್ಮಾಣ
  • ಸಮಾಜ ಕಲ್ಯಾಣ ಇಲಾಖೆಯಡಿ ಬೌದ್ಧ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಗಳಿಗೆ ರೂ. 1,500 ಕೋಟಿ ಅನುದಾನ
  • ಗಂಗಾ ಕಲ್ಯಾಣ ಯೋಜನೆಯಡಿ ಪ್ರತಿ ಕೊಳವೆ ಬಾವಿಗಳ ವಿದ್ಯುದೀಕರಣಕ್ಕಾಗಿ ಪಾವತಿಸುವ ಮೊತ್ತ 75,000 ರೂ.ಗಳಿಂದ 1,50,000 ರೂ.ಗಳಿಗೆ ಹೆಚ್ಚಳ
  • ನಾಲ್ಕೂ ಇಲಾಖೆಗಳಲ್ಲಿ ಖಾಲಿ ಇರುವ 2,500 ಹುದ್ದೆಗಳ ಭರ್ತಿಗೆ ಕ್ರಮ
  • ಪ್ರತಿ ಜಿಲ್ಲೆಗೆ 150 ಸಂಖ್ಯಾಬಲದ ಒಂದು ಬಾಲಕಿಯರ ಮತ್ತು ಒಂದು ಬಾಲಕರ ಒಟ್ಟು 62 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಸ್ಥಾಪನೆ
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣಕ್ಕೆ ಅನುವು ಮಾಡಿಕೊಡಲು ಒಟ್ಟು 31 ವಸತಿ ಶಾಲೆಗಳನ್ನು ಉನ್ನತೀಕರಿಸಲಾಗುವುದು
  • ವಸತಿ ಶಾಲೆಗಳಿಲ್ಲದ ಹೋಬಳಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಒಟ್ಟು 40 ಹೊಸ ವಸತಿ ಶಾಲೆಗಳ ಸ್ಥಾಪನೆ
  • ಕ್ರೈಸ್ ವಸತಿ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ನೀಡಲು 50 ಕೋಟಿ ರೂ.ಗಳನ್ನು ಒದಗಿಸಲಾಗುವುದು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ:

  • ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 1,39,844 ಅಂಗನವಾಡಿ ಕಾರ್ಯಕರ್ತೆಯರು / ಸಹಾಯಕಿಯರಿಗೆ ಹೆಚ್ಚುವರಿ ಒಂದು ಜೊತೆ ಸಮವಸ್ತ್ರ ವಿತರಣೆ
  • ಮಾಜಿ ದೇವದಾಸಿಯರು, ಲಿಂಗತ್ವ ಅಲ್ಪಸಂಖ್ಯಾತರು, ಚೇತನ ಹಾಗೂ ಧನಶ್ರೀ ಯೋಜನೆಯ ಫಲಾನುಭವಿಗಳಿಗೆ ಆದಾಯೋತ್ಪನ್ನ ಚಟುವಟಿಕೆಗಳಿಗಾಗಿ ನೀಡಲಾಗುವ ಪ್ರೋತ್ಸಾಹಧನ ರೂ.45,000ಕ್ಕೆ ಹೆಚ್ಚಳ
  • ಮಾದಕ ವ್ಯಸನಕ್ಕೆ ಒಳಗಾದ 18 ವರ್ಷದೊಳಗಿನ ಮಕ್ಕಳಿಗಾಗಿ ಪ್ರಾಯೋಗಿಕವಾಗಿ ಬೆಂಗಳೂರಿನ ನಿಮ್ಹಾನ್ಸ್ ಹಾಗೂ ಧಾರವಾಡದ ಡಿಮ್ಹಾನ್ಸ್ ಸಂಸ್ಥೆಗಳ ಸಹಯೋಗದಲ್ಲಿ 'ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರʼಗಳ ಆರಂಭ
  • ರೂ.200 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಲಭ್ಯವಿರುವ 1,668 ನಿವೇಶನಗಳಲ್ಲಿ ನೂತನ ಅಂಗನವಾಡಿ ಕಟ್ಟಡಗಳ ನಿರ್ಮಾಣ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ:

  • ವೈದ್ಯಕೀಯ ಕಾಲೇಜುಗಳು, ಆಸ್ಪತ್ರೆಗಳು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಕಾಮಗಾರಿಗಳಿಗೆ 620 ಕೋಟಿ ರೂ.ಗಳ ಅನುದಾನವನ್ನು ಮತ್ತು ಉಪಕರಣಗಳ ಖರೀದಿಗಾಗಿ 220 ಕೋಟಿ ರೂ.ಗಳ ಅನುದಾನ ಮೀಸಲು
  • ರೂ.180 ಕೋಟಿ ವೆಚ್ಚದಲ್ಲಿ ಮೈಸೂರಿನ ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯನ್ನು 600 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೆ
  • ಕಾರವಾರ ಮತ್ತು ಯಾದಗಿರಿಯಲ್ಲಿ ತಲಾ 100 ಕೋಟಿ ರೂ. ವೆಚ್ಚದಲ್ಲಿ ಸೂಪ‌ರ್ ಸ್ಪೆಷಾಲಿಟಿ ಆಸ್ಪತ್ರೆಗಳ ಸ್ಥಾಪನೆ
  • ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ 'ಶಾಂತವೇರಿ ಗೋಪಾಲಗೌಡ ಆಸ್ಪತ್ರೆ' ಎಂದು ಮರುನಾಮಕರಣ.
  • ರೂ.900 ಕೋಟಿ ಅನುದಾನದಡಿ ಆರೋಗ್ಯ ಇಲಾಖೆಯಲ್ಲಿನ ಮೂಲಸೌಕರ್ಯ ಅಭಿವೃದ್ಧಿ
  • ರೂ. 45 ಕೋಟಿ ಅನುದಾನದಡಿ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸಮಗ್ರ ಆಘಾತ ಆರೈಕೆ (Trauma Care) ಸೇವೆಗಳನ್ನು ಒದಗಿಸಲು ತುರ್ತು ಚಿಕಿತ್ಸಾ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಐಸಿಯುಗಳಿಗೆ ವೈದ್ಯಕೀಯ ಉಪಕರಣಗಳು ಮತ್ತು ಸಾಧನಗಳನ್ನು ಹಂತ ಹಂತವಾಗಿ ಪೂರೈಸುವ ಮೂಲಕ ಮೇಲ್ದರ್ಜೆಗೆ
  • ಟೈಪ್-1 ಮಧುಮೇಹದಿಂದ (Type-1 Diabetes) ಬಳಲುತ್ತಿರುವ 18 ವರ್ಷ ವಯಸ್ಸಿನವರೆಗಿನ ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಉಚಿತ ಇನ್ಸುಲಿನ್ ಪೆನ್‌ಗಳನ್ನು ನೀಡಲಾಗುವುದು.
  • ಇಲಾಖೆಯಲ್ಲಿ ಖಾಲಿ ಇರುವ 2,500 ಹುದ್ದೆಗಳ ಭರ್ತಿ

ಉನ್ನತ ಶಿಕ್ಷಣ ಇಲಾಖೆ:

  • ರೂ.2,500 ಕೋಟಿ ವೆಚ್ಚದಲ್ಲಿ 'ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ' ಅನುಷ್ಠಾನ. ಈ ಯೋಜನೆಯಡಿ 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 11 ಪಾಲಿಟೆಕ್ನಿಕ್‌ಗಳು ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಮತ್ತು ಸ್ಟಾರ್ಟ್-ಅಪ್‌ ಸಂಸ್ಕೃತಿಯ ಪ್ರೋತ್ಸಾಹಕ್ಕಾಗಿ 9 ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ
  • ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ 1,000 ಬೋಧಕ ಹುದ್ದೆಗಳನ್ನು ತರ್ಕಬದ್ಧಗೊಳಿಸಿ ಹಂತ ಹಂತವಾಗಿ ಭರ್ತಿ ಮಾಡಲು ಕ್ರಮ
  • ರಾಜ್ಯದ 25 ಸರ್ಕಾರಿ ಪದವಿ ಕಾಲೇಜು, ಮೂರು ಪಾಲಿಟೆಕ್ನಿಕ್ ಹಾಗೂ ಮೂರು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು ರೂ.31 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗೆ ಅವಶ್ಯವಿರುವ ಮೂಲ ಸೌಲಭ್ಯ ವ್ಯವಸ್ಥೆ ನಿರ್ಮಾಣ
  • ವಿಜಯಪುರ ಜಿಲ್ಲೆಯ ಚಡಚಣ, ಬೆಳಗಾವಿ ಗ್ರಾಮಾಂತರ ಹಾಗೂ ಮೈಸೂರು ನಗರದ ನರಸಿಂಹರಾಜ ಕ್ಷೇತ್ರ ಹಾಗೂ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸ್ಥಾಪನೆಗೆ ಕ್ರಮ

ಶಾಲಾ ಶಿಕ್ಷಣ ಇಲಾಖೆ:

  • 2026-27 ಸಾಲಿನಲ್ಲಿ ಶಾಲಾ - ಕಾಲೇಜುಗಳಲ್ಲಿ ಖಾಲಿ ಇರುವ 15,000 ಬೋಧಕ ಹುದ್ದೆಗಳ ಭರ್ತಿಗೆ ಕ್ರಮ
  • ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಿಸಿ ಮಾನಸಿಕ ಆರೋಗ್ಯವನ್ನು ಸುಧಾರಿಸಲು 204 BRC ಕೇಂದ್ರಗಳಲ್ಲಿ ಪ್ರತಿ ಕೇಂದ್ರಕ್ಕೆ ಒಬ್ಬರು ಅರ್ಹ ಮಾನಸಿಕ ಆರೋಗ್ಯ ಸಲಹೆಗಾರರ ನೇಮಕ
  • ವಿಜಯಪುರದ ಸೈನಿಕ ಶಾಲೆಯ ಹಾಸ್ಟೆಲ್ ಕಟ್ಟಡಗಳನ್ನು ಹಂತ ಹಂತವಾಗಿ ಪುನರ್ ನಿರ್ಮಿಸಲು ಪ್ರಸಕ್ತ ಸಾಲಿನಲ್ಲಿ ರೂ.10 ಕೋಟಿ ಅನುದಾನ
  • ಹೆಚ್ಚುತ್ತಿರುವ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಗೆ ನಿಷೇಧ
  • ಮುಂದಿನ 3 ವರ್ಷಗಳಲ್ಲಿ ರೂ.3,900 ಕೋಟಿ ಅನುದಾನದಡಿ ʼಉತ್ತಮ ಕಲಿಕೆ ಉಜ್ವಲ ಭವಿಷ್ಯʼ ಎಂಬ ಘೋಷವಾಕ್ಯದೊಂದಿಗೆ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು ಒಟ್ಟಾರೆ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ ಉನ್ನತೀಕರಿಸಲಾಗುವುದು
  • ಸರ್ಕಾರಿ, ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಕೊಠಡಿ ನಿರ್ಮಾಣ ಮತ್ತು ಕೊಠಡಿಗಳ ದುರಸ್ತಿ ಕಾಮಗಾರಿಗಳಿಗೆ ರೂ.565 ಕೋಟಿ, ಶೌಚಾಲಯ ನಿರ್ಮಾಣಕ್ಕಾಗಿ ರೂ.75 ಕೋಟಿ ಹಾಗೂ ಶಾಲೆಗಳಿಗೆ ಪೀಠೋಪಕರಣಗಳನ್ನು ಖರೀದಿಸಲು ರೂ.25 ಕೋಟಿ ಅನುದಾನ ಹಂಚಿಕೆ
  • ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಗಾಗಿ 125 ಕೋಟಿ ರೂ.ಗಳ ಅನುದಾನ

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: